`ಮುಂದಿನ ಒಂದು ವಾರದ ಅವಧಿಯಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರವಹಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ. `ಎಲ್ಲಡೆ ತಪಾಸಣಾ ಕೇಂದ್ರ ನಿರ್ಮಿಸಿ ಅಕ್ರಮ ಗೋ ಸಾಗಾಟ ತಡೆಯಬೇಕು’ ಎಂದು ಯಲ್ಲಾಪುರ ಬಿಜೆಪಿ ಘಟಕದವರು ಒತ್ತಾಯಿಸಿದ್ದಾರೆ.
ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮುಂದಾಳತ್ವದಲ್ಲಿ ಪಕ್ಷದ ಪದಾಧಿಕಾರಿಗಳು ಗುರುವಾರ ಪೊಲೀಸ್ ಠಾಣೆಗೆ ಬಂದಿದ್ದರು. ಸಿಪಿಐ ರಮೇಶ ಹಾನಾಪುರ ಅವರನ್ನು ಭೇಟಿ ಮಾಡಿ `ಗೋವು ಮತ್ತು ನಾವು’ ವಿಷಯವಾಗಿ ಮಾತನಾಡಿದರು. `ಪ್ರತಿ ವರ್ಷ ಈ ಸಮಯದಲ್ಲಿ ಅಕ್ರಮ ಗೋ ಸಾಗಾಟ ನಡೆಯುತ್ತಿದೆ. ಸಾಕಷ್ಟು ಬಾರಿ ಪೊಲೀಸರು ಅದನ್ನು ಹಿಡಿದಿದ್ದಾರೆ. ಈ ವರ್ಷವೂ ಅತ್ಯಧಿಕ ಪ್ರಮಾಣದಲ್ಲಿ ಗೋ ಸಾಗಾಟ ನಡೆಯುವ ಸಾಧ್ಯತೆಯಿದ್ದು, ಅದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.
`ನಾವಲ್ಲರೂ ಗೋವನ್ನು ದೇವರು ಎಂದು ಪೂಜಿಸುತ್ತೇವೆ. ಆ ಗೋವಿಗೆ ಹಿಂಸೆ ನೀಡುವುದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಆಗುತ್ತದೆ. ಅನೇಕ ಬಾರಿ ಯಲ್ಲಾಪುರ ಮಾರ್ಗವಾಗಿ ಹಿಂಸಾತ್ಮಕವಾಗಿ ಗೋ ಸಾಗಾಟ ನಡೆದಿದ್ದು, ಪೊಲೀಸರ ಸಹಾಯಪಡೆದು ಹಿಂದು ಕಾರ್ಯಕರ್ತರು ಅದನ್ನು ತಡೆದಿದ್ದಾರೆ. ಪೊಲೀಸರು ಸಹ ಸಾಕಷ್ಟು ಬಾರಿ ಅಕ್ರಮ ಗೋ ಸಾಗಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ, ಗೋವುಗಳ ರಕ್ಷಣೆಗೆ ಪೊಲೀಸರು ತಪಾಸಣಾ ಕೇಂದ್ರಗಳ ಸ್ಥಾಪನೆ ಹೆಚ್ಚಿಸುವುದು ಅನಿವಾರ್ಯವಾಗಿದೆ’ ಎಂದು ಅಲ್ಲಿದ್ದವರು ಮನವರಿಕೆ ಮಾಡಿದರು.
ಬಿಜೆಪಿ ಪ್ರಮುಖರಾದ ಉಮೇಶ ಭಾಗ್ವತ, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಮೇಶ್ವರ ನಾಯ್ಕ, ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ ತಳೇಕರ, ಬಿಜೆಪಿ ಪದಾಧಿಕಾರಿಗಳಾದ ಮಹೇಶ ನಾಯ್ಕ, ದೀಲೀಪ ಅಂಬಿಗ, ತುಳಸಿದಾಸ ನಾಯ್ಕ, ರಾಜೇಷ ಭಟ್ಟ, ವಿಠ್ಠು ಶೆಲ್ಕೆ, ಸುನೀಲ ಶೆಟ್ಟಿ ಇದ್ದರು.