`ಅಕ್ರಮ ಗೋ ಸಾಗಾಟ ಪ್ರಕರಣದ ಅಡಿ ಸಿಕ್ಕಿ ಬಿದ್ದರೆ 7 ವರ್ಷ ಜೈಲು ಹಾಗೂ 10 ಲಕ್ಷ ರೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ’ ಎನ್ನುವ ಮೂಲಕ ಅಕ್ರಮ ನಡೆಸುವವರಿಗೆ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಎಚ್ಚರಿಕೆ ನೀಡಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ತಡೆಗೆ 24 ಕಡೆ ತಪಾಸಣಾ ಕೇಂದ್ರ ತೆರೆಯಲಾಗಿದೆ. ಅಕ್ರಮ ನಡೆಸಿ ಸಿಕ್ಕಿಬಿದ್ದರೆ ಕಾನೂನು ಕ್ರಮ ಖಚಿತ’ ಎಂದವರು ಎಚ್ಚರಿಸಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆ ಕೆರಳಿಸುವಂತೆ ಸುದ್ದಿ ಹರಡುವವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.
`ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿ ಅಡಚಣೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಅಧಿಕಾರಿಗಳಿಗೂ ತಾಕೀತು ಮಾಡಿದ್ದಾರೆ. `ಬಕ್ರೀದ್ ಸಮಯದಲ್ಲಿ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ನಗರಾಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
`ಪ್ರಾರ್ಥನಾ ಸ್ಥಳದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಸೋಶಿಯಲ್ ಮಿಡಿಯಾ ಮೇಲೆ ನಿಗಾವಹಿಸಲಾಗಿದ್ದು, ಕೋಮು ಪ್ರಚೋದಕ ಭಾಷಣ ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಎಚ್ಚರಿಸಿದರು. `ಬಕ್ರೀದ್ ಪ್ರಯುಕ್ತ 4 ದಿನಗಳ ಕಾಲ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಾನೂನು ಉಲ್ಲಂಘನೆಯ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದವರು ಮನವಿ ಮಾಡಿದರು.
`ಬಕ್ರೀದ್ ಹಬ್ಬದ ಸಮಯದಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲು ಬಿಡುವುದಿಲ್ಲ. ಪರಸ್ಪರ ಸಾಮರಸ್ಯದಿಂದ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡುತ್ತೇವೆ’ ಎಂದು ಅಲ್ಲಿ ಹಾಜರಿದ್ದ ಮುಸ್ಲಿಂ ಮುಖಂಡರು ಮಾತುಕೊಟ್ಟರು. ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ, ಜಗದೀಶ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್ ಇತರರಿದ್ದರು.