ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಜೂನ್ 5ರಂದು 53ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಅವರ ಅಭಿಮಾನಿಗಳು 18 ಸಾವಿರ ಶಾಲಾ ಮಕ್ಕಳಿಗೆ ಲಡ್ಡು ವಿತರಣೆ ಮಾಡಿದ್ದಾರೆ!
ಹೊನ್ನಾವರ ತಾಲೂಕಿನ ವಿವಿಧ ಶಾಲೆಗಳಿಗೆ ತೆರಳಿದ ಮಂಕಾಳು ವೈದ್ಯ ಅವರ ಬೆಂಬಲಿಗರು ಶಾಲಾ ಮಕ್ಕಳಿಗೆ ಸಿಹಿ ವಿತರಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸಹ ಈ ವೇಳೆ ಮಕ್ಕಳ ಜೊತೆ ಬೆರೆತಿದ್ದು, ಶಾಲೆಯ ಸಮಸ್ಯೆಗಳನ್ನು ಆಲಿಸಿದ್ದಾರೆ. ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುವ ಭರವಸೆಯನ್ನು ನೀಡಿದ್ದಾರೆ.
ಇನ್ನೂ, ಮಂಕಾಳು ವೈದ್ಯ ಅವರಿಗೆ ಅಭಿಮಾನಿಗಳು ದೊಡ್ಡ ಪ್ರಮಾಣದ ಕೇಕ್ ತರಿಸಿದ್ದಾರೆ. ಆ ಕೇಕ್ ಕತ್ತರಿಸಿಯೂ ಅವರು ಸಂಭ್ರಮಾಚರಣೆ ನಡೆಸಿದರು. ಇನ್ನೂ ಕೆಲವರು ಆಸ್ಪತ್ರೆಗೆ ತೆರಳಿ ಅಲ್ಲಿದ್ದ ರೋಗಿಗಳಿಗೆ ಹಣ್ಣು ವಿತರಿಸಿದ್ದಾರೆ. ಹಲವರು ಮಂಕಾಳು ವೈದ್ಯ ಅವರ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಿದ್ದಾರೆ. `ಸಚಿವರಿಗೆ ಮಕ್ಕಳು ಎಂದರೆ ಇಷ್ಟ. ಹೀಗಾಗಿ ಮಕ್ಕಳಿಗೆ ಲಡ್ಡು ವಿತರಿಸಿದ್ದೇವೆ’ ಎಂದು ಅವರ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದರು.
`ಆರ್‌ಸಿಬಿ ವಿಜಯೋತ್ಸವದ ವೇಳೆ ದುರಂತ ನಡೆದ ಕಾರಣ ಹುಟ್ಟುಹಬ್ಬ ಆಚರಿಸದೇ ಇರಲು ನಿರ್ಧರಿಸಿದ್ದೆ. ಆದರೆ, ಅಪಾರ ಅಭಿಮಾನಿಗಳು ಮನೆಗೆ ಬಂದು ಶುಭಕೋರಿದ್ದಾರೆ. ಜನರ ಋಣ ತೀರಿಸಲು ಸಾಧ್ಯವಿಲ್ಲ’ ಎಂದು ಈ ವೇಳೆ ಮಂಕಾಳು ವೈದ್ಯ ಹೇಳಿದ್ದಾರೆ.