ಪ್ರವಾಸಿ ತಾಣದೊಂದಿಗೆ ಪುಣ್ಯ ಕ್ಷೇತ್ರವನ್ನು ಹೊಂದಿರುವ ಗೋಕರ್ಣದ ಅವ್ಯವಸ್ಥೆಗಳು ಒಂದೆರಡಲ್ಲ. ಈ ಭಾಗದಲ್ಲಿ ನಿತ್ಯವೂ ಒಂದೆರಡು ಅಪಘಾತ ಸಾಮಾನ್ಯವಾಗಿದ್ದು, ಅಲ್ಲಿನ ಗ್ರಾ ಪಂ ಆಡಳಿತ ವೈಪಲ್ಯವೇ ಇದಕ್ಕೆ ಮುಖ್ಯ ಕಾರಣ.
ಕೆಲ ದಿನಗಳ ಹಿಂದೆ ಗಂಜೀಗದ್ದೆ ಕಡೆ ಹಾದು ಹೋದ ರಸ್ತೆ ಚರಂಡಿ ಸ್ವಚ್ಛಗೊಳಿಸುವ ಕೆಲಸ ಶುರುವಾಯಿತು. ಆ ವೇಳೆ ಚರಂಡಿಗೆ ಮುಚ್ಚಿದ ಹಲಿಗೆಯನ್ನು ತೆಗೆದು ಹಾಗೇ ಬಿಡಲಾಯಿತು. ಚರಂಡಿ ಸ್ವಚ್ಛ ಮಾಡುವ ಕೆಲಸ ಮುಂದುವರೆಯಲಿಲ್ಲ. ಚರಂಡಿಗೆ ಮುಚ್ಚಿದ ಹಲಿಗೆಯನ್ನು ಸರಿ ಮಾಡಲಿಲ್ಲ. ಪರಿಣಾಮ ನಿತ್ಯ ಆ ಭಾಗದಲ್ಲಿ ಅವಘಡ ನಡೆಯುತ್ತಿದ್ದು, ತೆರೆದ ಗುಂಡಿಯನ್ನು ಮುಚ್ಚುವ ಪ್ರಯತ್ನಕ್ಕೆ ಅಲ್ಲಿನ ಆಡಳಿತದವರು ಮುಂದಾಗಿಲ್ಲ.
ಕಿರಿದಾದ ರಸ್ತೆಯಲ್ಲಿ ಸಂಚರಿವುಸ ಅನೇಕರು ಬಾಯ್ತೆರೆದುಕೊಂಡಿರುವ ಚರಂಡಿಗೆ ಬೀಳುತ್ತಿದ್ದಾರೆ. ಅವರೆಲ್ಲರೂ ಸಣ್ಣಪುಟ್ಟ ಗಾಯದೊಂದಿಗೆ ಮನೆಗೆ ಮರಳುತ್ತಿದ್ದಾರೆ. ಮೊನ್ನೆ ಒಬ್ಬ ಪಾದಚಾರಿ ಈ ರಸ್ತೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ನಿನ್ನೆ ಬೈಕ್ ಸವಾರರೊಬ್ಬರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಈ ದಿನ ಪ್ರವಾಸಿ ಕಾರೊಂದು ಆ ಮಾರ್ಗದಲ್ಲಿ ಸಿಕ್ಕಿ ಬಿದ್ದಿದ್ದು, ಸ್ಥಳೀಯರೆಲ್ಲ ಸೇರಿ ಅದನ್ನು ಗುಂಡಿಯಿoದ ಮೇಲೆತ್ತಿದ್ದಾರೆ.
ಪ್ರತಿ ವರ್ಷವೂ ಗ್ರಾಮ ಪಂಚಾಯತ ಚರಂಡಿ ಹೂಳೆತ್ತುವ ಕೆಲಸ ಶುರು ಮಾಡುತ್ತದೆ. ಆದರೆ, ಒಮ್ಮೆಯೂ ಶುರು ಮಾಡಿದ ಆ ಕೆಲಸವನ್ನು ಪೂರ್ಣಗೊಳಿಸಿದ ಉದಾಹರಣೆಗಳಿಲ್ಲ. ಚರಂಡಿ ಸ್ವಚ್ಛ ಮಾಡುವ ನೆಪದಲ್ಲಿ ಸಿಮೆಂಟ್ ಹಲಿಗೆ ತೆಗೆಯುತ್ತಿದ್ದು, ಅದನ್ನು ಮತ್ತೆ ಸರಿ ಮಾಡಿ ಹಾಕುವ ಉಸಾಬರಿಗೆ ಯಾರೂ ಹೋಗುವುದಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಸೂಚನೆ ನೀಡಿದರೂ ಅದು ಅಧಿಕಾರಿಗಳಿಗೆ ಕೇಳುತ್ತಿಲ್ಲ.
ಹೊಂಡಮಯ ರಸ್ತೆ, ಮುಚ್ಚದ ಗಟಾರದ ಜೊತೆ ವಿಪರೀತ ಸೊಳ್ಳೆ ಕಾಟ ಇಲ್ಲಿ ಸಾಮಾನ್ಯ. ಹೀಗಾಗಿ ರಾತ್ರಿ ವೇಳೆ ಸಂಚರಿಸುವುದು ಇಲ್ಲಿ ಅಪಾಯಕಾರಿ. ಅದರಲ್ಲಿಯೂ ಚಿಕ್ಕ ಮಕ್ಕಳೇನಾದರೂ ನಡೆದು ಬರುತ್ತಿದ್ದರೆ ಆಯ ತಪ್ಪಿ ಗುಂಡಿಯೊಳಗೆ ಬಿದ್ದರೂ ಅದಕ್ಕೆ ಅಲ್ಲಿನ ಆಡಳಿತ ಹೊಣೆ ಅಲ್ಲ!