ಯಲ್ಲಾಪುರದ `ಪಶು ಸಂಜೀವಿನಿ’ ಸಂಚಾರಿ ಚಿಕಿತ್ಸಾಲಯದ ಸಿಬ್ಬಂದಿ ಜಾನು ಗೌಳಿ ಹಾಗೂ ಮನೋಜ ಗೌಡ ಅವರು ಬೀಡಾಡಿ ದನಗಳಿಗೆ ರೇಡಿಯಂ ಅಳವಡಿಸುವ ಕಾಯಕ ನಡೆಸಿದ್ದಾರೆ. ಅವರು ಇಲ್ಲಿನ ಗೋ ಪರಿವಾರದವರಿಗೆ ರೇಡಿಯಂ ತೆಗೆಸಿಕೊಟ್ಟಿದ್ದು, ಅವರು ಪಟ್ಟಣದ ಎಲ್ಲಡೆ ಸಂಚರಿಸಿ ಗೋವುಗಳ ಕುತ್ತಿಗೆಗೆ ಬೆಲ್ಟ್ ಹಾಕುತ್ತಿದ್ದಾರೆ.
ಪಶು ಸಂಜೀವಿನಿ ಸೇವೆ ಯಲ್ಲಾಪುರದಲ್ಲಿ ಉತ್ತಮ ರೀತಿ ಕಾರ್ಯ ನಿರ್ವಹಿಸುತ್ತಿದೆ. 1062 ಉಚಿತ ಸಹಾಯವಾಣಿಗೆ ಕರೆ ಮಾಡಿದ ತಾಸಿನ ಒಳಗೆ ಆಂಬುಲೆನ್ಸ್ ಸೇವೆಗೆ ಸಿಗುತ್ತಿದೆ. ಗ್ರಾಮೀಣ ಭಾಗದಲ್ಲಿನ ಹೈನುಗಾರರಿಗೆ ಇದರಿಂದ ಅನುಕೂಲವಾಗಿದ್ದು, ಈ ಪಶು ಸಂಜೀವಿನಿಯ ಮನೋಜ ಗೌಡ ಹಾಗೂ ಜಾನು ಗೌಳಿ ಅವರು ಈ ವಾಹನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಟ್ಟಣದಲ್ಲಿ ಬೀಡಾಡಿ ದನಗಳಿಂದ ಅಪಘಾತವಾಗುತ್ತಿದ್ದು, ಅದನ್ನು ತಪ್ಪಿಸುವುದಕ್ಕಾಗಿ ಜಾನು ಗೌಳಿ ಹಾಗೂ ಮನೋಜ ಗೌಡ ಅವರು ರೇಡಿಯಂ ಬೆಲ್ಟ್ ಪಟ್ಟಿಯನ್ನು ಖರೀದಿಸಿದ್ದರು. ಅದನ್ನು ಗೋ ಪರಿವಾರದವರಿಗೆ ಒದಗಿಸಿದ್ದು, ರಾತ್ರಿ ವೇಳೆ ಕಾಣುವ ಬೀಡಾಡಿ ದನಗಳಿಗೆ ಗೋ ಪರಿವಾರದ ಸೋಮೇಶ್ವರ ನಾಯ್ಕ, ಪ್ರತಾಪ ಶಿವಯೋಗಿ ಹಾಗೂ ಸಂಜೀವ್ ಜಾದವ್ ಈ ಬೆಲ್ಟುಗಳನ್ನು ಹಾಕುತ್ತಿದ್ದಾರೆ.
ಗುರುವಾರ ರಾತ್ರಿ 20ಕ್ಕೂ ಅಧಿಕ ಜಾನುವಾರುಗಳಿಗೆ ಅವರು ಬೆಲ್ಟ್ ಅಳವಡಿಸಿದರು. ರಾತ್ರಿ ವೇಳೆ ಗೋವುಗಳ ಮೇಲೆ ವಾಹನದ ಬೆಳಕು ಬಿದ್ದಾಗ ರೆಡಿಯಂ ಹೊಳೆಯಲಿದ್ದು, ಅದರಿಂದ ಅಪಘಾತದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. `ದನ-ಕರುಗಳಿಗೆ ರಿಪ್ಲೆಕ್ಟಿವ್ ಕಾಲರ್ ಅಳವಡಿಸಿದ್ದರಿಂದ ಜಾನುವಾರುಗಳ ಜೊತೆ ಜನರಿಗೂ ಅನುಕೂಲವಾಗಿದೆ. ಭವಿಷ್ಯದಲ್ಲಿ ಎಲ್ಲಾ ದನಗಳಿಗೂ ಇದನ್ನು ಅಳವಡಿಸುವ ಗುರಿಯಿದೆ’ ಎಂದು ಗೋ ಪರಿವಾರದ ಶಿವು, ಸುಭಾಷ, ಲೋಹಿತ, ಪ್ರಕಾಶ್ ನಾಯ್ಕ, ಕಾರ್ತಿಕ ಬೋವಿ ಪ್ರತಿಕ್ರಿಯಿಸಿದರು.