ಕಾರವಾರದ ಹಣಕೋಣ ಬಳಿಯಿರುವ ಭೀಮಕೋಲ ಕೆರೆಯಲ್ಲಿ ಜಲ ಸಾಹಸ ಚಟುವಟಿಕೆ ಶುರುವಾಗಿದೆ. ಇದರಿಂದ ಪ್ರವಾಸೋದ್ಯಮ ಬೆಳವಣಿಗೆಯಾಗಿದ್ದು, ಸ್ಥಳೀಯರಲ್ಲಿಯೂ ಮಂದಹಾಸ ಮೂಡಿದೆ.
ಭೀಮಕೋಲ ಎಂಬುದು ಮೊದಲು ಹಾಳು ಬಿದ್ದ ಪ್ರದೇಶವಾಗಿತ್ತು. ಅಲ್ಲಿದ್ದ ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿತ್ತು. ಅಂಚಿನ ಅರಣ್ಯ ಪ್ರದೇಶದಲ್ಲಿ ಗಿಡ-ಗಂಟಿಗಳು ಬೆಳೆದಿದ್ದವು. ಘಟ್ಟ ಪ್ರದೇಶವಾದ ಕಾರಣ ಅಲ್ಲಿ ಹೋಗಲು ಯಾರೂ ಆಸಕ್ತರಿರಲಿಲ್ಲ. ಹೀಗಿರುವಾಗ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಆ ಪ್ರದೇಶ ಅಭಿವೃದ್ಧಿಗೆ ಯೋಜನೆ ರೂಪಿಸಿತು. ನರೆಗಾ ಸೇರಿ ವಿವಿಧ ಯೋಜನೆ ಅಡಿ ಕ್ಷೇತ್ರದ ಚಿತ್ರಣವನ್ನು ಬದಲು ಮಾಡಲಾಯಿತು.
ಸದ್ಯ ಅಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಕೆರೆಯ ಹೂಳು ತೆಗೆದು ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಇದರೊಂದಿಗೆ ಈಚೆಗೆ ಕೆರೆಯಲ್ಲಿ ಬೋಟಿಂಗ್ ಸಹ ಶುರುವಾಗಿದೆ. ಉದ್ಯಾನವನ ಹಾಗೂ ಬೋಟಿಂಗ್ ಚಟುವಟಿಕೆ ಒಟ್ಟಿಗೆ ಸಿಗುವುದರಿಂದ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ.
ಸಣ್ಣ ನೀರಾವರಿ ಇಲಾಖೆಯ ಈ ಕೆರೆಯನ್ನು ಜಿಲ್ಲಾ ಪಂಚಾಯಿತಿತವೂ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಮಾಡಿದ್ದು, ಸಾಮಾಜಿಕ ಅರಣ್ಯ ವಿಭಾಗದಿಂದ ಸುಮಾರು 37 ಲಕ್ಷ ರೂ ವೆಚ್ಚ ಮಾಡಲಾಗಿತ್ತು. ಆ ವೇಳೆಯಲ್ಲಿಯೇ ಇಲ್ಲಿ ಪ್ರವಾಸಿಗರು ಬರುತ್ತಿದ್ದರು. ಹೀಗಾಗಿ ಅವರ ಅನುಕೂಲಕ್ಕಾಗಿ ಶೌಚಗೃಹ ಹಾಗೂ ಸ್ನಾನಗೃಹವನ್ನು ಸಹ ಮಾಡಲಾಗಿದ್ದು, ಸದ್ಯ ಕೆರೆ ನಿರ್ವಹಣಾ ಸಮಿತಿಯನ್ನು ಸಹ ರಚಿಸಲಾಗಿದೆ.
ಕೆರೆ ಅಭಿವೃದ್ಧಿ ಸಮಿತಿಯಿಂದ ಇಲ್ಲಿ ಆಗಮಿಸುವವರಿಗೆ ಪ್ರವೇಶ ಶುಲ್ಕ ಪಡೆಯಲಾಗುತ್ತದೆ. ಟೆಂಡರ್ ಮೂಲಕ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಾಸಿಗೆ ಇಂತಿಷ್ಟು ಎಂಬ ಲೆಕ್ಕಾಚಾರದ ಅಡಿ ಬೋಟಿಂಗ್ ಶುಲ್ಕಪಡೆಯಲು ನಿರ್ಧರಿಸಲಾಗಿದೆ. ಭವಿಷ್ಯದಲ್ಲಿ ಇಲ್ಲಿ ತೂಗು ಸೇತುವೆಯೊಂದನ್ನು ಮಾಡಲು ಯೋಜನೆ ಸಿದ್ಧವಿದೆ.