ಯಲ್ಲಾಪುರ ಅಂಕೋಲಾ ಮಾರ್ಗದ ಅರಬೈಲ್ ಘಟ್ಟದಲ್ಲಿ ಕಾರುಗಳನ್ನು ಅಡ್ಡಹಾಕಿ ದರೋಡೆ ಮಾಡುವ ತಂಡದ ಸದಸ್ಯರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
2024ರ ಮೇ ತಿಂಗಳಿನಲ್ಲಿ ಮುಂಬೈಯಿoದ ಮಂಗಳೂರಿಗೆ ಹೋಗುತ್ತಿದ್ದ ಮಹಾರಾಷ್ಟದ ಸುರೇಶ್ ರಾವ್ ಎಂಬಾತರನ್ನು ನಾಲ್ಕು ಜನ ಅಡ್ಡಗಟ್ಟಿದ್ದರು. ಮೊಬೈಲ್ ನೆಟ್‌ವರ್ಕ ಸಹ ಸರಿಯಾಗಿ ಸಿಗದ ಜಾಗದಲ್ಲಿ ಪ್ರಯಾಣಿಕರನ್ನು ಸತಾಯಿಸಿದ್ದರು. ಕಾರಿನಲ್ಲಿದ್ದ ಸಂಪತ್ ಕುಮಾರ್ ಅವರನ್ನು ದರೋಡೆಕೋರರು ಬೆದರಿಸಿದ್ದರು. ಅದಾದ ನಂತರ ಹಲ್ಲೆಯನ್ನು ನಡೆಸಿ, ಕಾರಿನ ಗ್ಲಾಸ್ ಒಡೆದು ರಂಪಾಟ ನಡೆಸಿದ್ದರು. ಸಂಪತ್ ಕುಮಾರ್ ಹಾಗೂ ಸುರೇಶ್ ರಾವ್ ಅವರ ಬಳಿಯಿದ್ದ ಮೊಬೈಲು, ಕಾರಿನ ಚಾವಿಯನ್ನು ಕಿತ್ತುಕೊಂಡಿದ್ದರು. `ನೀವು ಶಿಂಧೆ ಸಾಹೇಬರ ಕಾರು ಓವರ್ ಟೆಕ್ ಮಾಡಿ ತಪ್ಪು ಮಾಡಿದ್ದೀರಿ. ಅವರ ಬಳಿ ಬನ್ನಿ’ ಎಂದು ಕಾರಿನಲ್ಲಿದ್ದವರನ್ನು ಕರೆದೊಯ್ದಿದ್ದರು.
ಅವರಿಬ್ಬರನ್ನು ತಮ್ಮ ಕಾರಿಗೆ ಹತ್ತಿಸಿಕೊಂಡ ದರೋಡೆಕೋರರು ಅರಬೈಲ್ ಕಡೆಯಿಂದ ಹುಬ್ಬಳ್ಳಿ ಕಡೆ ಕಾರು ಓಡಿಸಿದ್ದರು. ಆ ಇಬ್ಬರನ್ನು ರಸ್ತೆ ಬದಿ ಇಳಿಸಿ ಬಸ್ ಹತ್ತಿ ಅರಬೈಲ್’ಗೆ ಹೋಗಿ ಎಂದು ದಬಾಯಿಸಿದ್ದರು. ಈ ಬಗ್ಗೆ ಸುರೇಶ್ ರಾವ್ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಬಂದು ಸಹಾಯ ಕೇಳಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದಾಗ ಮಹಾರಾಷ್ಟದ ಸತೀಶ ಕೋಳಿ ಎಂಬಾತ ಸಿಕ್ಕಿ ಬಿದ್ದಿದ್ದು, ಆತನ ಜೊತೆ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿದ್ದರು.
ಆದರೆ, ಆ ಅವಧಿಯಲ್ಲಿ ಮಹಾರಾಷ್ಟದ ಅಬ್ದುಲ್ಲಾ ಶೇಖ್ ಹಾಗೂ ಸಂಕೇತ ತುಳಸಿಕರ್ ತಪ್ಪಿಸಿಕೊಂಡಿದ್ದರು. ಪೊಲೀಸರು ಅಂದಿನಿoದ ಈವರೆಗೆ ಅವರ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಜೂನ್ 4ರಂದು ಶಿರವಾಲಾ ಹಾಗೂ ಖಡಗಾವದಲ್ಲಿ ಅವರಿಬ್ಬರು ಅಡಗಿರುವ ವಿಷಯ ಅರಿತು ಈ ಬಗ್ಗೆ ಯಲ್ಲಾಪುರ ಸಿಪಿಐ ರಮೇಶ ಹಾನಾಪುರ ಅವರು ಡಿವೈಎಸ್ಪಿ ಗೀತಾ ಪಾಟೀಲ್ ಅವರಿಗೆ ತಿಳಿಸಿದರು.
ಗೀತಾ ಪಾಟೀಲ್ ಅವರು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹಾಗೂ ಹೆಚ್ಚುವರಿ ಅಧೀಕ್ಷಕ ಜಗದೀಶ ಎಂ, ಕೃಷ್ಣಮೂರ್ತಿ ಅವರಿಗೆ ಸುದ್ದಿ ಮುಟ್ಟಿಸಿದರು. ಹಿರಿಯ ಅಧಿಕಾರಿಗಳ ಸಹಯೋಗದಲ್ಲಿ ಪಿಎಸ್‌ಐ ಸಿದ್ದಪ್ಪ ಗುಡಿ ಅವರು ನೆರೆ ರಾಜ್ಯದ ಪೊಲೀಸರ ನೆರವುಪಡೆದರು. ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ಮಹಾವೀರ, ಗಿರೀಶ ಲಮಾಣಿ ನೇತ್ರತ್ವದ ತಂಡ ಆ ಇಬ್ಬರು ಡಕಾಯಿತರನ್ನು ಬಂಧಿಸಿತು. ಸೆರೆ ಸಿಕ್ಕ ಅಬ್ದುಲ್ಲಾ ಶೇಖ್ ಹಾಗೂ ಸಂಕೇತ ತುಳಸಿಕರ್ ಅವರನ್ನು ಸದ್ಯ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ನ್ಯಾಯಾಲಯ ಅವರಿಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.