2025ರ ಮಾರ್ಚ ಅಂತ್ಯಕ್ಕೆ ಕೊನೆಗೊಂಡ ಲೆಕ್ಕಾಚಾರದ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ವಿವಿಧ ಬ್ಯಾಂಕುಗಳಲ್ಲಿ ಜನ 24,315 ಕೋಟಿ ರೂ ಠೇವಣಿ ಮಾಡಿದ್ದಾರೆ. ಆದರೆ, 11,322 ಕೋಟಿ ರೂ ಮಾತ್ರ ಸಾಲ ವಿತರಣೆಯಾಗಿದೆ. ಠೇವಣಿಯ ಹಣ ದುಡಿಸುವುದು ಬ್ಯಾಂಕಿನವರಿಗೆ ಕಷ್ಟವಾಗಿದೆ!
ಬ್ಯಾಂಕುಗಳಲ್ಲಿ ಸಾಲ ಮತ್ತು ಠೇವಣಿ ಅನುಪಾತ ಶೇ 60ರಷ್ಟಿರಬೇಕು. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 46.56ರಷ್ಟರ ಅನುಪಾತವಿದೆ. 2025 ಮಾರ್ಚ್ ಅಂತ್ಯದ ತ್ರೆಮಾಸಿಕದಲ್ಲಿ ಜಿಲ್ಲೆಯ ಕೃಷಿ ಕ್ಷೇತ್ರಕ್ಕೆ 3275 ಕೋಟಿ, ಸಣ್ಣ, ಮಧ್ಯಮ ಮತ್ತು ಸೂಕ್ಷ ವಲಯಕ್ಕೆ 2773 ಕೋಟಿ, ಶೈಕ್ಷಣಿಕ ಕ್ಷೇತ್ರಕ್ಕೆ 73 ಕೋಟಿ , ವಸತಿ ಕ್ಷೇತ್ರಕ್ಕೆ 65 ಕೋಟಿ ಸೇರಿ ಆದ್ಯತಾವಲಯಕ್ಕೆ ಒಟ್ಟು 6323 ಕೋಟಿ ಸಾಲ ವಿತರಿಸಲಾಗಿದೆ. ಆದ್ಯೇತರ ವಲಯಕ್ಕೆ 2451 ಕೋಟಿ ರೂ ಸಾಲ ವಿತರಣೆ ಆಗದೆ.
ಅದಾಗಿಯೂ ಠೇವಣಿಗೆ ಹೋಲಿಸಿದರೆ ಸಾಲ ಪ್ರಮಾಣ ಕಡಿಮೆಯಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ಬ್ಯಾಂಕುಗಳು ಸರ್ಕಾರಿ ಯೋಜನೆಗಳಿಗೆ ದೊರೆಯುವ ಸಾಲದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಸಲ್ಲಿಕೆಯಾಗುವ ಅರ್ಜಿಗಳನ್ನು ತಿರಸ್ಕಾರ ಮಾಡದೇ ಸಾಲ ವಿತರಿಸಬೇಕು. ಜೊತೆಗೆ ಕೃಷಿ, ವಸತಿ , ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಶೈಕ್ಷಣಿಕ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸಬೇಕು’ ಎಂದು ಜಿ ಪಂ ಮುಖ್ಯಾಧಿಕಾರಿ ಈಶ್ವರ ಕಾಂದೂ ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಶುಕ್ರವಾರ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಅವರು ಸಾಲಗಾರರನ್ನು ಉತ್ತೇಜಿಸಲು ಸಾಲ ಮೇಳ ಆಯೋಜಿಸುವಂತೆ ಸೂಚಿಸಿದರು. `ಅಗತ್ಯವಿರುವವರಿಗೆ ಯಾವುದೇ ತೊಂದರೆ ನೀಡದೇ ಸಾಲ ನೀಡಿ’ ಎಂದು ಅವರು ಸೂಚಿಸಿದರು. `ಬ್ಯಾಂಕಿಗೆ ಆಗಮಿಸುವ ಗ್ರಾಹಕರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಪಿಂಚಣಿದಾರರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ಕಡಿಮೆ ವೆಚ್ಚದ ವಿಮಾ ಯೋಜನೆಗಳನ್ನು ಪ್ರತಿಯೊಬ್ಬರಿಗೂ ಮಾಡಿಸಬೇಕು. ಸರಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನರೇಗಾ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಪ್ರಯೋಜನ ಒದಗಿಸಬೇಕು’ ಎಂದು ಅವರು ಸೂಚಿಸಿದ್ದಾರೆ.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದ್ ಸಾ ಹಬೀಬ್, ಯೋಜನಾ ನಿರ್ದೇಶಕ ಕರೀಂ ಅಸಾದಿ, ನಬಾರ್ಡ್ ನ ಮೆನೇಜರ್ ಸುಶೀಲ್ ನಾಯಕ್, ಆರ್.ಬಿ.ಐ ನ ಅಧಿಕಾರಿ ಮೋನಿ ರಾಜಾ ಬ್ರಹ್ಮ, ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ರಾಜಪ್ಪ ಹಾಗೂ ಬ್ಯಾಂಕ್ ಅಧಿಕಾರಿಗಳು ಇದ್ದರು.