ಶಿರಸಿಯ ಮೂಲೆ ಮೂಲೆಗೂ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಬಿಎಸ್‌ಎನ್‌ಎಲ್ ಟವರ್ ಕಟ್ಟಲಾಗಿದೆ. ಆದರೆ, ಅದರಿಂದ ಜನರಿಗೆ ಮಾತ್ರ ಪ್ರಯೋಜನ ಸಿಗುತ್ತಿಲ್ಲ!
ಶಿರಸಿ ಗ್ರಾಮೀಣ ಭಾಗದಲ್ಲಿ ಜೋರು ಮಳೆ ಬಿದ್ದರೆ ಕರೆಂಟ್ ಇರಲ್ಲ. ಮೋಡ ಕವಿದರೆ ಮೊಬೈಲ್ ನೆಟ್‌ವರ್ಕ ಕೆಲಸ ಮಾಡಿಲ್ಲ. ಹೀಗಾಗಿ ದುಬಾರಿ ಬೆಲೆಯ ಮೊಬೈಲ್ ಖರೀದಿಸಿ ಟವರ್ ನೋಡಿ ಬಿಎಸ್‌ಎನ್‌ಎಲ್ ಸಿಮ್ ಅಳವಡಿಸಿಕೊಂಡವರು ಈಗಲೂ ವ್ಯಾಪ್ತಿ ಪ್ರದೇಶದ ಹೊರಗೆ ಉಳಿದಿದ್ದಾರೆ!
ಶಿರಸಿ-ಯಲ್ಲಾಪುರ ಭಾಗದಲ್ಲಿ ಕೇಂದ್ರ ಸರ್ಕಾರ 4ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಅಡಿಯಲ್ಲಿ ಕಳೆದ ವರ್ಷ ಅಗತ್ಯವಿರುವ ಕಡೆ ಟವರ್ ನಿರ್ಮಿಸಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಹೋರಾಟ ನಡೆಸಿ ಗುಡ್ಡದ ಮೇಲೆ ಟವರ್ ಮಂಜೂರಿ ಮಾಡಿಸಿದ್ದಾರೆ. ಅನೇಕ ಕಡೆ ಟವರ್ ನಿರ್ಮಾಣವಾದರೂ ನೆಟ್‌ವರ್ಕ ಬಿಟ್ಟಿಲ್ಲ. ಇನ್ನೂ ಕೆಲವು ಕಡೆ ಮನೆ ಮುಂದೆ ಟವರ್ ಇದ್ದರೂ ಮನೆ ಒಳಗೆ ಫೋನ್ ರಿಂಗಾಗುತ್ತಿಲ್ಲ!
ಇನ್ನೂ ಕೆಲವು ಕಡೆ ಸೋಲಾರ್ ಆಧಾರದಲ್ಲಿ ಟವರ್ ಕೆಲಸ ಮಾಡುತ್ತಿದ್ದು, ಬಿಸಿಲು ಬಿದ್ದಾಗ ಮಾತ್ರ ಬಿಎಸ್‌ಎನ್‌ಎಲ್ ನೆಟ್‌ವರ್ಕ ಬರುತ್ತದೆ. ಹೀಗಾಗಿ ಗ್ರಾಹಕರಿಗೆ ಮಳೆಗಾಲದ ಮೂರು ತಿಂಗಳು ಬೇರೆ ಕಂಪನಿಗೆ ಪೋರ್ಟ ಆಗುವುದು ಅನಿವಾರ್ಯವಾಗಿದೆ. ಹಲವು ಕಡೆ ಕಳೆದ ವರ್ಷ ನಿರ್ಮಿಸಿದ ಟವರ್ ಇನ್ನೂ ಉದ್ಘಾಟನೆಯೇ ಆಗಿಲ್ಲ. `ಉದ್ಘಾಟನೆಗೆ ಸಂಸದರಿಗೆ ಪುರಸೋತಾಗುತ್ತಿಲ್ಲ’ ಎಂಬುದು ಊರ ಮೇಲಿನ ಇನ್ನೊಂದು ಸುದ್ದಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ 252 ಹಳ್ಳಿಗಳಲ್ಲಿ ಟವರ್ ನಿರ್ಮಿಸುವುದು ಕೇಂದ್ರ ಸರ್ಕಾರದ ಗುರಿ. ಆ ಪೈಕಿ 71 ಕಡೆ ಬಿಎಸ್‌ಎನ್‌ಎಲ್ ಗೋಪುರ ಕಟ್ಟಲಾಗಿದೆ. ಅದರಲ್ಲಿ ಎಲ್ಲಾ ಟವರ್ ಸಿಗ್ನಲ್ ಬಿಡುತ್ತಿಲ್ಲ. ಸೋಲಾರ್ ಶಕ್ತಿ ಆಧರಿಸಿ ಸಿಗ್ನಲ್ ಬಿಡುವ ಟವರ್’ಗಳಿಗೆ ಮಳೆಗಾಲದಲ್ಲಿ ಕೆಲಸವಿಲ್ಲ. ಊರಿಗೆ ಟವರ್ ಬಂದ ಖುಷಿಗೆ ಅನೇಕರು ಕಳೆದ ವರ್ಷವೇ ಬಿಎಸ್‌ಎನ್‌ಎಲ್’ಗೆ ಮರಳಿದ್ದಾರೆ. 4ಜಿ ಸೇವೆ ಒದಗಿಸಿದ ಕಾರಣ ಮೊದಲ ಅವಧಿಯಲ್ಲಿ ಖುಷಿಯಿಂದ ಇಂಟರ್‌ನೆಟ್ ಸೇವೆಯನ್ನು ಬಳಸಿದ್ದಾರೆ. ಆದರೆ, ಈ ವರ್ಷ ಮೊದಲ ಮಳೆಗೆ ಟವರ್ ಹಾಳಾಗಿದ್ದರಿಂದ ಅವರೆಲ್ಲರೂ ನೆಟ್‌ವರ್ಕ ಸಿಗದೇ ನಿರಾಸೆವ್ಯಕ್ತಪಡಿಸಿದ್ದಾರೆ.