ಕಾರವಾರದ ವಿನಾಯಕ ನಾಯ್ಕ ಅವರ ಮೊಬೈಲ್ ಕಳ್ಳತನವಾಗಿದೆ. ಮಣಿಕಂಠ ರಾತೋಡ್ ಎಂಬಾತ ಈ ಮೊಬೈಲ್ ಕದ್ದಿದ್ದು, ಪೊಲೀಸರು ಕಳ್ಳನ ಹುಡುಕಾಟ ಶುರು ಮಾಡಿದ್ದಾರೆ.
ತೋಡೂರಿನ ಪಾಲೇಕರವಾಡದಲ್ಲಿ ವಿನಾಯಕ ನಾಯ್ಕ ಅವರು ವಾಸವಾಗಿದ್ದರು. ಹಣ್ಣಿನ ವ್ಯಾಪಾರ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಜೂನ್ 6ರ ಮಧ್ಯಾಹ್ನ ಅಮದಳ್ಳಿಯ ಮೀನು ಮಾರುಕಟ್ಟೆ ಬಳಿ ಅವರು ಹಣ್ಣಿನ ವ್ಯಾಪಾರ ನಡೆಸುವ ವೇಳೆ ಅಲ್ಲಿಗೆ ಇಬ್ಬರು ಅಪರಿಚಿತರು ಬಂದರು. ವಿನಾಯಕ ನಾಯ್ಕ ಅವರ ರೆಡ್ಮಿ ಮೊಬೈಲ್ ಕದ್ದು ಅವರು ಪರಾರಿಯಾದರು. ಜೊತೆಗೆ ಅಂಗಡಿ ವ್ಯಾಪಾರದ 700ರೂ ಹಣವನ್ನು ಅವರು ದೋಚಿದ್ದರು.
7 ಸಾವಿರ ರೂ ಮೌಲ್ಯದ ಮೊಬೈಲ್ ಹಾಗೂ 700ರೂ ಹಣ ಕಳ್ಳತನವಾದ ಬಗ್ಗೆ ವಿನಾಯಕ ನಾಯ್ಕ ಅವರು ಅಕ್ಕಪಕ್ಕದವರಲ್ಲಿ ಹೇಳಿಕೊಂಡರು. ಈ ವಿಷಯ ಅರಿತ ಅಮದಳ್ಳಿಯ ಜನ ಆ ಕಳ್ಳರಿಬ್ಬರನ್ನು ಹಿಡಿದು ವಿಚಾರಿಸಿದರು. ಮೊದಲು `ನಾವು ಕದ್ದಿಲ್ಲ’ ಎಂದ ಆ ಕಳ್ಳರು ನಂತರ ಮೌನವಾಗಿದ್ದರು. ಊರಿನವರು ಹೆಸರು ಕೇಳಿದಾಗ ಅದರಲ್ಲಿ ಒಬ್ಬ `ಮಣ್ಣಿಕಂಠ ರಾತೋಡ್’ ಎಂದು ಬಾಯ್ಬಿಟ್ಟಿದ್ದು, ಇನ್ನೊಬ್ಬ ಹೆಸರನ್ನು ಹೇಳಲಿಲ್ಲ.
ಅದಾದ ನಂತರ ಅವರಿಬ್ಬರು ಊರಿನ ಜನರಿಂದ ತಪ್ಪಿಸಿಕೊಂಡು ಪರಾರಿಯಾದರು. ಆತನ ಹೆಸರಿನ ಆಧಾರದಲ್ಲಿ ವಿನಾಯಕ ನಾಯ್ಕ ಅವರು ಮಣಿಕಂಠ ರಾತೋಡ್ ಮೊಬೈಲ್ ಕದ್ದ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಕಳ್ಳರಿಬ್ಬರ ಹುಡುಕಾಟ ನಡೆಸಿದ್ದಾರೆ.