`ಜಮ್ಮು ಕಾಶ್ಮೀರದಲ್ಲಿ ಏಕತೆ ಮತ್ತು ಏಕಾತ್ಮತೆಯ ಭಾವ ಗಟ್ಟಿಗೊಳ್ಳುತ್ತಿರುವ ವೇಳೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಹಿಂದುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದರು. ಅದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ ಹೇಳಿದ್ದಾರೆ.
ಅಂಕೋಲಾದಲ್ಲಿ ‘ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟ’ ಸಂವಾದ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು ಪಾಕಿಸ್ತಾನ ಪ್ರಚೋದಿತ ಉಗ್ರಗಾಮಿಗಳು ನಡೆಸಿದ ಅಮಾನವೀಯ ಕೃತ್ಯವನ್ನು ಮಟ್ಟ ಹಾಕಲು ರೂಪಿಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸಿಗೆ ಕಾಂಗ್ರೆಸ್ ಪಕ್ಷದ ನಾಯಕರು ಕೂಡಾ ತಲೆದೂಗಿದ್ದಾರೆ. ಭಾರತ ದೇಶಕ್ಕೆ ಅಪಾಯ ತಂದೊಡ್ಡಿದ್ದ ಅಂತರಾಷ್ಟ್ರೀಯ ಮಟ್ಟದ 36 ಭಯೋತ್ಪಾದಕರು ಅಜ್ಞಾತ ವ್ಯಕ್ತಿಗಳು ಕಳೆದ ಎರಡು ವರ್ಷಗಳಲ್ಲಿ ಗುಂಡಿಗೆ ಬಲಿಯಾಗಿದ್ದಾರೆ. ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯು ನೆಲೆಗಳನ್ನೂ, ಭಯೋತ್ಪಾದಕರ ಅಡಗುದಾಣಗಳನ್ನು ಧ್ವಂಸಗೊಳಿಸುವುದರೊAದಿಗೆ ದೇಶದ ತಾಕತ್ತನ್ನು ಪ್ರದರ್ಶಿಸಿದಂತಾಗಿದೆ’ ಎಂದು ಹೇಳಿದರು.
`ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದ 86 ಸಾವಿರ ಸ್ಥಳಗಳಲ್ಲಿ ಅದ್ಧೂರಿಯಿಂದ ನಡೆದ ತಿರಂಗಾ ಯಾತ್ರೆ ಬದಲಾಗುತ್ತಿರುವ ಭಾರತಕ್ಕೆ ಸಾಕ್ಷಿಯಾಗಿದೆ. ಆದರೆ, ರಾಜ್ಯದ ಕೆಲವು ಬಚ್ಚಲುಬಾಯಿಯ ಸಚಿವರು ಸಾಮಾಜಿಕ ಜಾಲತಾಣಗಳ ಮೂಲಕ ಲೇವಡಿಯ ಮಾತುಗಳನ್ನಾಡುವ ಮೂಲಕ ತಮ್ಮ ಡೊಂಕು ಬಾಲದ ಬುದ್ದಿಯನ್ನು ಪ್ರದರ್ಶಿಸಿದ್ದಾರೆ. ವಿಕಸಿತ ಭಾರತದ ಅಭಿವೃದ್ಧಿಯನ್ನು ಸಹಿಸಲಾಗದ ಇವರು ಜನರಲ್ಲಿ ಭಯದ ವಾತಾವರಣದೊಂದಿಗೆ ಅಸುರಕ್ಷತೆಯನ್ನು ಸೃಷ್ಟಿಯಲು ಹೊರಟಿರುವವರ ವಿರುದ್ಧ ಭಾರತೀಯರೆಲ್ಲರೂ ಒಗ್ಗಟ್ಟಾಗಿ ದೇಶದ ಅಖಂಡತೆಯನ್ನು ಕಾಪಾಡಬೇಕಿದೆ’ ಎಂದು ಅವರು ಕರೆ ನೀಡಿದರು.
ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ನಾಗರಾಜ ನಾಯಕ, ನಿವೃತ್ತ ಯೋಧ ದಾಮುದ್ಲೇಕರ ಮಾತನಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕರಾದ ಸುನೀಲ ಹೆಗಡೆ, ಸುನೀಲ ನಾಯ್ಕ, ಜಿಲ್ಲಾ ವಕ್ತಾರ ನಾಗರಾಜ ವಿ. ನಾಯಕ, ಭಾಸ್ಕರ ನಾರ್ವೇಕರ, ಜಗದೀಶ ನಾಯಕ ಮೊಗಟಾ, ಗಜಾನನ ಗುನಗಾ ಹಳಕಾರ, ನಂದು ಗಾಂವ್ಕರ, ವಿಠ್ಠಲ ಗಾಂವ್ಕರ, ಗಣಪತಿ ನಾಯಕ ಕಾರ್ಯಕ್ರಮದಲ್ಲಿದ್ದರು.
ಮಹೇಶ ಮಹಾಲೆ ಒಂದೇ ಮಾತರಂ ಗೀತೆ ಪ್ರಸ್ತುತ ಪಡಿಸಿದರು. ರಾಷ್ಟ್ರ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್ ಎಸ್ ಹೆಗಡೆ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ನಿರೂಪಿಸಿದರು. ಶಿವಾಜಿ ನರಸಾನಿ ವಂದಿಸಿದರು. ಸಂವಾದದಲ್ಲಿ ಲೇಖಕ ಮಹಾಂತೇಶ ರೇವಡಿ, ನಿವೃತ್ತ ಶಿಕ್ಷಕ ಬಾಲಚಂದ್ರ ನಾಯಕ ಭಾವಿಕೇರಿ, ಪ್ರವೀಣ ನಾಯ್ಕ ಸಿದ್ದಾಪುರ ಪಾಲ್ಗೊಂಡಿದ್ದರು.