ಹೊಟ್ಟೆನೋವು ಎಂದು ಕುಮಟಾದ ಹೈಟೆಕ್ ಆಸ್ಪತ್ರೆಗೆ ಹೋಗಿದ್ದ ಸುಬ್ರಹ್ಮಣ್ಯ ಅಂಬಿಗ ಅಲ್ಲಿಯೇ ಸಾವನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದ ಆರೋಪದ ಅಡಿ ಅನೇಕರು ಪ್ರತಿಭಟನೆ ನಡೆಸಿದ್ದಾರೆ.
ಕುಮಟಾ ಕೊಡ್ಕಣಿಯ ಸುಬ್ರಹ್ಮಣ್ಯ ಅಂಬಿಗ (26) ಕೂಲಿ ಕೆಲಸ ಮಾಡಿಕೊಂಡಿದ್ದರು. ಮೇ 30ರಂದು ಅವರಿಗೆ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿತು. ಹೀಗಾಗಿ ಮೊದಲು ಅವರು ಮಿರ್ಜಾನ್ ಆಸ್ಪತ್ರೆಗೆ ಹೋಗಿದ್ದರು. ಅದಾದ ನಂತರ ಕೆನರಾ ಹೆಲ್ತ ಸೆಂಟರ್’ಗೆ ತೆರಳಿ ಚಿಕಿತ್ಸೆಪಡೆದಿದ್ದರು. ಅಲ್ಲಿಯೂ ವಾಸಿಯಾಗದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹೈಟೆಕ್ ಆಸ್ಪತ್ರೆಗೆ ಬಂದಿದ್ದರು.
ಮೇ 5ರ ಸಂಜೆ ಅವರಿಗೆ ಮತ್ತೆ ಹೊಟ್ಟೆನೋವು ಕಾಣಿಸಿತು. ಹೀಗಾಗಿ ಅವರು ಆ ದಿನ ರಾತ್ರಿ ಮತ್ತೆ ಹೈಟೆಕ್ ಆಸ್ಪತ್ರೆಗೆ ಬಂದಿದ್ದರು. ಸುಬ್ರಹ್ಮಣ್ಯ ಅಂಬಿಗ ಅವರನ್ನು ಸ್ಕಾನಿಂಗ್’ಗೆ ಒಳಪಡಿಸಲು ಕೆಳಮಹಡಿಗೆ ಬರುವಂತೆ ವೈದ್ಯರು ಸೂಚಿಸಿದ್ದರು. ಅದರ ಪ್ರಕಾರ ಸುಬ್ರಹ್ಮಣ್ಯ ಅಂಬಿಗ ಅವರು ಸ್ಕಾನಿಂಗ್‌ಗೆ ಹೊರಟಿದ್ದರು.
ಈ ವೇಳೆ ಆಸ್ಪತ್ರೆ ಸಿಬ್ಬಂದಿಗೆ ಹೇಳದೇ ಸುಬ್ರಹ್ಮಣ್ಯ ಅಂಬಿಗ ಅವರು ಹೊಟೇಲ್‌ಗೆ ಹೋಗಿ ಮತ್ತೆ ಆಸ್ಪತ್ರೆಗೆ ಮರಳಿದ್ದರು. ಆ ವೇಳೆ ಸುಬ್ರಹ್ಮಣ್ಯ ಅಂಬಿಗ ಅವರ ತಂದೆ ನಾರಾಯಣ ಅಂಬಿಗ ಹಾಗೂ ಸಂಬoಧಿ ಸಂತೋಷ ಅಂಬಿಗ ಸಹ ಜೊತೆಗಿದ್ದರು. ಆಸ್ಪತ್ರೆಯ ಸ್ಟೇಶನ್ ರೂಂ-1ನ್ನು ನೋಡಿದ ತಕ್ಷಣ ಸುಬ್ರಹ್ಮಣ್ಯ ಅಂಬಿಗ ಸಿಡಿಮಿಡಿಗೊಂಡರು.
`ಆ ಕೋಣೆಯಲ್ಲಿ ನನಗೆ ಇರಿಸಬೇಡಿ’ ಎಂದು ಸುಬ್ರಹ್ಮಣ್ಯ ಅಂಬಿಗ ವಿನಂತಿ ಮಾಡಿದರು. ಆಸ್ಪತ್ರೆಯವರು ಆ ಕೋಣೆಯಿಂದ ಹೊರಗೆ ಬಿಡದೇ ಇದ್ದಾಗ ಗಲಾಟೆ ಮಾಡಿದರು. ಸುಬ್ರಹ್ಮಣ್ಯ ಅಂಬಿಗ ಅವರು ಆ ರೂಮಿನಿಂದ ಹೊರಬರುವುದಕ್ಕಾಗಿ ಕಿಟಕಿಯ ಗಾಜು ಒಡೆದರು. ಆಗ, ಅವರ ಕೈಗೆ ಗಾಜು ಚುಚ್ಚಿದ್ದು, ಬಲಗೈಯಿಂದ ರಕ್ತ ಸೋರಲು ಶುರುವಾಯಿತು. ತೀವೃತರವಾದ ರಕ್ತಸ್ರಾವ ಉಂಟಾಯಿತು.
ಅಲ್ಲಿಯೇ ಕುಸಿದು ಬಿದ್ದು ಸುಬ್ರಹ್ಮಣ್ಯ ಅಂಬಿಗ ಸಾವನಪ್ಪಿದರು. ಈ ವಿಷಯ ತಿಳಿದ ನೂರಾರು ಜನ ಆಸ್ಪತ್ರೆ ಮುಂದೆ ಜಮಾಯಿಸಿದರು. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಆರೋಪಿಸಿ ಪ್ರತಿಭಟಿಸಿದರು. ಸುಬ್ರಹ್ಮಣ್ಯ ಅಂಬಿಗ ಅವರ ತಾಯಿ ಮಂಗಲಾ ಅಂಬಿಗ ಅವರು ಮಗನ ಶವದ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ತರು. ಕೊನೆಗೆ ಜೂ 6ರಂದು ಮಂಗಲಾ ಅಂಬಿಗ ಅವರು ಪೊಲೀಸ್ ಠಾಣೆಗೆ ತೆರಳಿ ವೈದ್ಯರ ವಿರುದ್ಧ ದೂರು ನೀಡಿದರು. ಕುಮಟಾ ಪಿಎಸ್‌ಐ ಮಂಜುನಾಥ ಗೌಡರ್ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.