ಕಳಚೆಯಲ್ಲಿ ಗುಡ್ಡ ಕುಸಿತ ಉಂಟಾದಾಗ ಅನೇಕ ದಾನಿಗಳು ಅಲ್ಲಿ ಧಾವಿಸಿದ್ದು, ಕೈಲಾದ ಸಹಾಯ ಮಾಡಿದ್ದರು. ಅದರ ಪ್ರಕಾರ, ಅಖಿಲ ಭಾರತ ಹವ್ಯಕ ಸಭಾ ಸಹ ಕಳಚೆ ಸಂತ್ರಸ್ತರಿಗೆ ನೆರವು ನೀಡಿದ್ದು, ಹವ್ಯಕ ಸಭಾ ನೀಡಿದ 6 ಲಕ್ಷ ರೂ ಹಣಕ್ಕೆ ಲೆಕ್ಕ ಕೊಡಿ ಎಂದು ಕೆಲವರು ಜಾಲತಾಣದಲ್ಲಿ ಪದೇ ಪದೇ ಪ್ರಶ್ನಿಸುತ್ತಿದ್ದಾರೆ.
2021ರ ಜುಲೈ 21ರಂದು ಕಳಚೆಯಲ್ಲಿ ಭಾರೀ ಪ್ರಮಾಣದ ಮಳೆ ಸುರಿಯಿತು. ಅದರ ಪರಿಣಾಮ ಆ ಭಾಗದ ಗುಡ್ಡ ಕುಸಿದು ಅನೇಕ ಮನೆಗಳಿಗೆ ಹಾನಿಯಾಯಿತು. ಮನೆ ಕುಸಿದು ಬಿದ್ದ ಕಾರಣ ವೃದ್ಧೆಯೊಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದರು. ದುರಂತದ ಸುದ್ದಿ ಕೇಳಿ ನಾನಾ ಭಾಗದ ಜನ ಆ ಸಮಯಕ್ಕೆ ನೆರವು ನೀಡಲು ಆಗಮಿಸಿದ್ದರು. ಈ ವೇಳೆ ಅಖಿಲ ಭಾರತ ಹವ್ಯಕ ಸಭಾ ಸಹ ಜನರ ಸಮಸ್ಯೆ ಆಲಿಸಿದ್ದು, ಸಂತ್ರಸ್ತರಿಗೆ ಆರ್ಥಿಕ ಸಹಾಯ ಮಾಡಿತು.
ಆಸ್ಪತ್ರೆಯಲ್ಲಿ ಅಸಹಾಯಕರಾಗಿರುವ ರೋಗಿಗಳಿಗೆ ಎರಡು ಬಾಳೆಹಣ್ಣು ಕೊಟ್ಟು ಮಾಧ್ಯಮಗಳಲ್ಲಿ ಪ್ರಚಾರಪಡೆಯುವವರ ನಡುವೆ ಹವ್ಯಕ ಮಹಾಸಭಾ ಭಿನ್ನವಾಗಿ ಯೋಚಿಸಿತು. ನೆರೆ ಸಂತ್ರಸ್ತರ ಅಸಹಾಯಕತೆಯನ್ನು ಹವ್ಯಕ ಮಹಾಸಭಾದವರು ಪ್ರಚಾರದ ವಸ್ತುವನ್ನಾಗಿಸಿಕೊಳ್ಳಲಿಲ್ಲ. ಸಂತ್ರಸ್ತರ ಮುಖವನ್ನು ಮುಖ್ಯವಾಹಿನಿಗೆ ತರಲಿಲ್ಲ. ಹೀಗಾಗಿ ಸಂತ್ರಸ್ತರಿಗೆ 6 ಲಕ್ಷ ರೂ ನೆರವು ನೀಡಿದ್ದರೂ ಆ ಬಗ್ಗೆ ಅವರು ಮಾಧ್ಯಮಗಳಲ್ಲಿ ದೊಡ್ಡದಾಗಿ ಫೋಟೋ-ವರದಿ ಪ್ರಕಟಿಸಲಿಲ್ಲ. ಹೀಗಾಗಿ ಹವ್ಯಕ ಮಹಾಸಭಾ ಮಾಡಿದ ಕೆಲಸ ಬಹುತೇಕರಿಗೆ ಗೊತ್ತಾಗಲಿಲ್ಲ.
ಈ ನಡುವೆ ಹವ್ಯಕ ಮಹಾಸಭಾ ನೆರೆ ಸಂತ್ರಸ್ತರಿಗೆ 6 ಲಕ್ಷ ಕೊಟ್ಟಿರುವ ವಿಷಯ ಜಾಲತಾಣದಲ್ಲಿ ಹರಿದಾಡಿತು. `ಆರು ಲಕ್ಷ ರೂ ಯಾರಿಗೂ ಬಂದಿಲ್ಲ’ ಎಂದು ಕೆಲವರು ಅನುಮಾನವ್ಯಕ್ತಪಡಿಸಿದರು. `ಹವ್ಯಕ ಮಹಾಸಭಾ ಒಬ್ಬರಿಗೆ 6 ಲಕ್ಷ ರೂ ಕೊಟ್ಟಿಲ್ಲ. 5 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿವರೆಗೆ ಸಂತ್ರಸ್ತರ ಖಾತೆಗೆ ಹಣ ಜಮಾ ಮಾಡಲಾಗಿದ್ದು, ಇದಕ್ಕಾಗಿ ಒಟ್ಟು 6 ಲಕ್ಷ ರೂ ವೆಚ್ಚವಾಗಿದೆ’ ಎಂದು ಸಮಜಾಯಿಶಿ ನೀಡಿದರೂ ಕೆಲವರು ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ. `6 ಲಕ್ಷ ರೂಪಾಯಿಯ ಲೆಕ್ಕ ಕೊಡಿ’ ಎಂದು ಕಳೆದ ಆರು ತಿಂಗಳಿನಿoದ ಜಾಲತಾಣಗಳಲ್ಲಿ ಬರೆದುಕೊಂಡರು. ಅದಕ್ಕೆ ಇನ್ನಷ್ಟು ರೆಕ್ಕೆ-ಪುಕ್ಕಗಳು ಸೇರಿಕೊಂಡವು.
ಇದರಿoದ ತಲೆಬಿಸಿಕೊಂಡ ಹವ್ಯಕ ಮಹಾಸಭಾದವರು ಲೆಕ್ಕ ಕೇಳಿದ ಕೆಲವರಿಗೆ ಮಾಹಿತಿ ನೀಡಿದರು. ದಾಖಲೆಗಳನ್ನು ಒದಗಿಸಿದರು. ಆದರೆ, ಲೆಕ್ಕ ಕೇಳುವವರ ಸಂಖ್ಯೆ ಕಡಿಮೆ ಆಗಲಿಲ್ಲ. ಪ್ರತಿ ದಿನ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಲೆಕ್ಕ ಕೊಡುವುದು ಸಭಾದವರಿಂದ ಸಾಧ್ಯವಾಗುವ ಕೆಲಸ ಆಗಿರಲಿಲ್ಲ. ಹೀಗಾಗಿ ಜಾಲತಾಣದಲ್ಲಿ ಪ್ರಶ್ನಿಸುವ ಬದಲು ಅಧಿಕೃತ ಪತ್ರದ ಮೂಲಕ ಪ್ರಶ್ನಿಸುವರಿಗೆ ಎಲ್ಲಾ ಲೆಕ್ಕ ಕೊಡಲು ಹವ್ಯಕ ಸಭಾದವರು ಸಿದ್ಧರಾಗಿದ್ದರು. S News ಡಿಜಿಟಲ್ ಸಹ ಕಳಚೆಗೆ ಬಂದ 6 ಲಕ್ಷ ರೂ ಹಣದ ಬಗ್ಗೆ ಲೆಕ್ಕ ಕೇಳಿದ್ದು, ಹವ್ಯಕ ಸಭಾ ನೀಡಿದ ದಾಖಲೆ ಪರಿಶೀಲಿಸಿದಾಗ ಈವರೆಗೆ 5.35 ಲಕ್ಷ ರೂ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆದ ಬಗ್ಗೆ ಲೆಕ್ಕ ಸಿಕ್ಕಿದೆ.
ಕಳಚೆ ಗುಡ್ಡ ಕುಸಿತದಿಂದ ಸಂತ್ರಸ್ತರಾದವರನ್ನು ಮಾತನಾಡಿಸಿದಾಗ ತಮ್ಮ ಖಾತೆಗೆ ಹಣ ಬಂದಿರುವುದನ್ನು ತೋರಿಸಿದರು. `ಆ ಅವಧಿಯಲ್ಲಿ ಅರ್ಜಿ ಕೊಟ್ಟ ಎಲ್ಲರಿಗೂ ಹವ್ಯಕ ಮಾಹಾಸಭಾ ಹಣಕಾಸಿನ ಸಹಾಯ ಮಾಡಿದೆ. ಕೆಲವರಿಂದ ಅರ್ಜಿ ಕೊಡಲು ಸಾಧ್ಯವಾಗಲಿಲ್ಲ. ಅದಾಗಿಯೂ ಅಲ್ಲಿನ ಪ್ರಮುಖರು ಅರ್ಜಿಪಡೆದು ನೆರವು ನೀಡಿದ್ದಾರೆ’ ಎಂದು ಆರ್ ಪಿ ಹೆಗಡೆ ಕಳಚೆ ಪ್ರತಿಕ್ರಿಯಿಸಿದರು.
ಹವ್ಯಕಸಭಾಗೆ ದುಡ್ಡು ಕೊಡುವವರು ಯಾರು?
ಕೇರಳ ರಾಜ್ಯದಿಂದ ಶುರುವಾಗಿ ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಂಗಳೂರು, ಮಡಿಕೇರಿ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ಹವ್ಯಕ ಮಹಾಸಭಾಗೆ ಸಾವಿರಾರು ಸಂಖ್ಯೆಯ ಸದಸ್ಯರಿದ್ದಾರೆ. 1 ಸಾವಿರ ರೂ ಆಜೀವ ಸದಸ್ಯತ್ವಹೊಂದಿದ ಪ್ರತಿಯೊಬ್ಬರಿಗೆ `ಹವ್ಯಕ’ ಪತ್ರಿಕೆ ಮನೆ ಬಾಗಿಲಿಗೆ ಬರಲಿದೆ. ಈ ರೀತಿ ಸದಸ್ಯತ್ವಪಡೆದವರು ಹಾಗೂ ಇತರೆ ದಾನಿಗಳು ಸಭಾಗೆ ನೆರವು ನೀಡುತ್ತಾರೆ.
ಆ ಹಣವನ್ನು ವಿದ್ಯಾರ್ಥಿ ವೇತನ, ಪ್ರಕೃತಿ ವಿಕೋಪ ಪರಿಹಾರ ಸೇರಿ ವಿವಿಧ ಕೆಲಸಗಳಿಗೆ ವಿಭಾಗಿಸಲಾಗುತ್ತದೆ. ಅಗತ್ಯವಿರುವಾಗ ಅದನ್ನು ಸಂಕಷ್ಟದಲ್ಲಿರುವವರಿಗೆ ಹಾಗೂ ಸಾಧಕರಿಗೆ ನೀಡುವ ಪದ್ಧತಿ ಮೊದಲಿನಿಂದಲೂ ಜಾರಿಯಲ್ಲಿದೆ. ಅಪಘಾತ, ಆರೋಗ್ಯ ಸಮಸ್ಯೆ ಆದವರಿಗೂ ಹವ್ಯಕ ಸಭಾ ನೆರವು ನೀಡಿದೆ. ಕೋವಿಡ್ ಅವಧಿಯಲ್ಲಿಯೂ ಸಾಕಷ್ಟು ಕೆಲಸ ಮಾಡಿದೆ. ಹವ್ಯಕ ಸಮ್ಮೇಳನ, ಸಂಘಟನೆ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಈ ಹವ್ಯಕ ಸಭಾ ಮುಂಚೂಣಿಯಲ್ಲಿದೆ.
ಹಣಕಾಸು ವಿಷಯವಾಗಿ ಮಹಾಸಭಾಗೆ ಪತ್ರ ಬರೆದವರೆಲ್ಲರಿಗೂ ಲೆಕ್ಕಾಚಾರದ ಮಾಹಿತಿ ಸಿಗುತ್ತದೆ. ಹೀಗಾಗಿ ಅಗತ್ಯವಿರುವವರು ಅಧಿಕೃತ ದಾಖಲೆಪಡೆಯಲು ಅವಕಾಶವಿದೆ.