ಬಲೆ ಹಾಕಿ ಮೀನು ಹಿಡಿಯುವ ವಿಷಯವಾಗಿ ಕುಮಟಾದ ಹೊಸ್ಕಟ್ಟಾ ಬಳಿ ಎರಡು ಗುಂಪಿನ ಮೀನುಗಾರರ ನಡುವೆ ಮಾರಾಮಾರಿ ನಡೆದಿದೆ. ಈ ವಿಷಯ ಅರಿತು ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೆಯೂ ದಾಳಿ ನಡೆದಿದೆ.
ಹೊಸಕಟ್ಟಾದ ಪ್ರಮೋದ ಹೊಸ್ಕಟ್ಟಾ ಅವರು ತೊರ್ಕೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಸ್ಕಟ್ಟಾ ಖ್ಯಾರಲಾಂಡ್ ಬಂಡಿಗೇಟ್ ನಿರ್ವಹಣೆ ಹಾಗೂ ಆ ಪ್ರದೇಶದ ಮೀನುಗಾರಿಕೆ ಟೆಂಡರ್ ಪಡೆದಿದ್ದರು. ಆದರೆ, ಗುರುವಾರ ರಾತ್ರಿ ಮಸಾಕಲ್’ನ ಪರಮೇಶ್ವರ ಹರಿಕಂತ್ರ, ನಾಗಪ್ಪ ಹರಿಕಂತ್ರ, ಮಂಜುನಾಥ ಹರಿಕಂತ್ರ, ಅನಂತ ಹರಿಕಂತ್ರ, ಹೊಸಕಟ್ಟಾದ ರಾಜು ಹೊಸ್ಕಟ್ಟಾ, ಜಗದೀಶ ಹೊಸ್ಕಟ್ಟಾ ಹಾಗೂ ರವಿ ಹೊಸ್ಕಟ್ಟಾ ಅಲ್ಲಿ ಆಗಮಿಸಿ ಮೀನು ಹಿಡಿಯುತ್ತಿದ್ದರು.
ಇದನ್ನು ನೋಡಿದ ಪ್ರಮೋದ ಹೊಸ್ಕಟ್ಟಾ ಅವರು ಟೆಂಡರ್ ಪಾಲುದಾರ ಪ್ರವೀರ ಹೊಸಕಟ್ಟಾ ಹಾಗೂ ಕೆಲಸದವರಿಗೆ ವಿಷಯ ತಿಳಿಸಿದರು. ಪ್ರವೀರ ಹೊಸಕಟ್ಟಾ ಕೆಲಸಗಾರರ ಜೊತೆ ಸ್ಥಳಕ್ಕೆ ಬಂದು ಟೆಂಡರ್ ಮಾಹಿತಿ ನೀಡಿದರು. ಆಗ ಎದುರಾಳಿಗಳು ಅದನ್ನು ಕೇಳಲಿಲ್ಲ. `ನಮಗೆ ಮೀನು ಹಿಡಿಯಲು ಮೀನುಗಾರಿಕಾ ಇಲಾಖೆ ಪಾಸ್ ಇದೆ’ ಎಂದು ಅವರು ಉತ್ತರಿಸಿದರು. ಈ ವಿಷಯವಾಗಿ ಎರಡು ಗುಂಪುಗಳ ನಡುವೆ ಬೈಗುಳ ಶುರುವಾಯಿತು.
`ಇಲ್ಲಿ ಟೆಂಡರ್ ಮಾಡಲು ಗ್ರಾಮ ಪಂಚಾಯತಗೆ ಅವಕಾಶ ಇಲ್ಲ’ ಎಂದು ಪರಮೇಶ್ವರ ಹರಿಕಂತ್ರ ವಾದಿಸಿದರು. `ಇಲ್ಲಿ ಪಾಸ್ ಕೊಡುವ ಅಧಿಕಾರ ಮೀನುಗಾರಿಕೆಗೆ ಇಲ್ಲ’ ಎಂದು ಪ್ರಮೋದ ಹೊಸ್ಕಟ್ಟಾ ಬೊಬ್ಬೆ ಹೊಡೆದರು. ಈ ವಿಷಯವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ಶುರುವಾಯಿತು. ಕಲ್ಲು ತೂರಾಟ ಸಹ ನಡೆಯಿತು. ವಿಷಯ ತಿಳಿದ 112 ಪೊಲೀಸರು ಸ್ಥಳಕ್ಕೆ ಹೋದರು. ಪೊಲೀಸ್ ಸಿಬ್ಬಂದಿ ಮೇಲೆ ಸಹ ಅಲ್ಲಿನವರು ಮುಗಿಬಿದ್ದರು.
ಅಲ್ಲಿ ಗಲಾಟೆ ಮಾಡುತ್ತಿದ್ದವರು ಪೊಲೀಸ್ ಸಿಬ್ಬಂದಿ ರಾಜು ಶಂಕರ ಮಾಳಿ ಅವರ ಯುನಿಪಾರಂ ಹರಿದರು. ಕೆಟ್ಟದಾಗಿ ನಿಂದಿಸಿ ಪೊಲೀಸರನ್ನು ಬೈದರು. ಹೀಗಾಗಿ ರಾಜು ಮಾಳಿ ಅವರು ಈ ಬಗ್ಗೆಯೂ ದೂರು ನೀಡಿದ್ದು, ಪಿಐ ಶ್ರೀಧರ್ ಎಸ್ ಆರ್ ಪ್ರಕರಣ ದಾಖಲಿಸಿಕೊಂಡರು. ಜೊತೆಗೆ ಪೊಲೀಸರ ಮೇಲೆ ಕೈ ಮಾಡಿದ ರಾಮಚಂದ್ರ ಬೊಮ್ಮಯ್ಯ ಹೊಸ್ಕಟ್ಟಾ, ರಾಜು ವೆಂಕಟ್ರಮಣ ಹರಿಕಂತ್ರ,ಪರಮೇಶ್ವರ ಮಂಕಾಳಿ ಹರಿಕಂತ್ರ, ನಾಗಪ್ಪ ಮಂಕಾಳಿ ಹರಿಕಂತ್ರ, ಪ್ರಮೋದ ದಯಾನಂದ ಹರಿಕಂತ್ರ, ನಾಗರಾಜ ಮೋಹನ ಹೊಸ್ಕಟ್ಟಾ, ಜಗದೀಶ ವೆಂಕಟ್ರಮಣ ಹರಿಕಂತ್ರ, ಚಂದ್ರಕಾoತ ಶಿವು ಹೊಸ್ಕಟ್ಟಾ, ಶಿವಾನಂದ ಗಜಾನನ ಹೊಸ್ಕಟ್ಟಾ, ಸದಾನಂದ ಮಂಕಾಳಿ ಹೊಸ್ಕಟ್ಟಾ ಎಂಬಾತರನ್ನು ಬಂಧಿಸಿದರು. ಅವರೆಲ್ಲರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.