ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈಚೆಗೆ ಹೊಸದಾಗಿ `ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್’ ಶುರು ಮಾಡಲಾಗಿದೆ. ಹೀಗಾಗಿ ಹೆಲ್ಮೆಟ್ ಧರಿಸಿದೇ ಬೈಕ್ ಓಡಿಸಿದರೂ ಪೊಲೀಸರು ಅಂಥವರ ಬೈಕ್ ತಡೆಯುವುದಿಲ್ಲ. ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದವರ ಮನೆಗೆ ಕೋರ್ಟ ನೋಟಿಸ್ ಬರಲಿದ್ದು, ಆಗ, ಶಾಸಕ-ಸಚಿವರು ಸೇರಿ ಯಾವ ಪ್ರಭಾವಿಗಳಿಂದ ಫೋನ್ ಮಾಡಿಸಿದರೂ ದಂಡ ಕಟ್ಟುವುದು ತಪ್ಪುವುದಿಲ್ಲ!
ಯಲ್ಲಾಪುರದಲ್ಲಿ ಈಚೆಗೆ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ. ಸಂಚಾರಿ ನಿಯಮ ಉಲ್ಲಂಘನೆಯೇ ಇದಕ್ಕೆ ಮುಖ್ಯ ಕಾರಣವಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಸಜ್ಜಾಗಿದ್ದಾರೆ. ಈ ಹಿನ್ನಲೆ ಪೊಲೀಸ್ ಠಾಣೆಯಲ್ಲಿ `ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್’ ಸ್ಥಾಪಿಸಲಾಗಿದೆ. ಪಟ್ಟಣದ ವಿವಿಧ ಕಡೆ 32 ಕ್ಯಾಮರಾ ಅಳವಡಿಸಲಾಗಿದ್ದು, ಹೆಲ್ಮೆಟ್ ಧರಿಸದವರ ಫೊಟೋ ಅದರಲ್ಲಿ ಸೆರೆಯಾಗಲಿದೆ. ಅದಾದ ನಂತರ ಮನೆ ಬಾಗಿಲಿಗೆ ನೋಟಿಸ್ ಬರಲಿದೆ.
ಹೆಲ್ಮೆಟ್ ಧರಿಸದೇ ಬೈಕ್ ಓಡಿಸುವವರಿಗೆ ಮಾತ್ರವಲ್ಲ. ಸೀಟ್ ಬೆಲ್ಟ್ ಧರಿಸದೇ ಕಾರು ಓಡಿಸುವವರಿಗೆ ಸಹ ಇದೇ ವ್ಯವಸ್ಥೆ ಆಧಾರದಲ್ಲಿ ನೋಟಿಸ್ ಬರಲಿದೆ. ಪದೇ ಪದೇ ನಿಯಮ ಉಲ್ಲಂಗಿಸುವವರ ವಿರುದ್ಧ ಇನ್ನಷ್ಟು ಕಾನೂನು ಕ್ರಮ ಜರುಗಿಸಲಾಗುತ್ತದೆ. ಪೊಲೀಸ್ ಠಾಣೆಯಲ್ಲಿರುವ ಸಿಬ್ಬಂದಿ ಕ್ಯಾಮರಾ ನೋಡುತ್ತಲಿದ್ದು, ಅದರ ಮೂಲಕ ವಾಹನ ಸವಾರರ ಮೇಲೆ ನಿಗಾವಹಿಸುತ್ತಾರೆ. ಮಹಿಳಾ ಸಿಬ್ಬಂದಿಯೊಬ್ಬರು ಇದೇ ಕೆಲಸಕ್ಕಾಗಿ ನಿಯೋಜನೆಗೊಂಡಿದ್ದಾರೆ.
`ಕ್ಯಾಮರಾದಲ್ಲಿ ಸಿಕ್ಕಿ ಬಿದ್ದ ಎಲ್ಲರಿಗೂ ಮೊದಲ ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಅದಾಗಿಯೂ ನಿಯಮ ಉಲ್ಲಂಘಿಸಿದರೆ ನೋಟಿಸ್ ನೀಡಿ ಕ್ರಮ ಜರುಗಿಸಲಾಗುತ್ತದೆ’ ಎಂದು ಯಲ್ಲಾಪುರ ಸಿಪಿಐ ರಮೇಶ ಹಾನಾಪುರ್ ಅವರು ಮಾಹಿತಿ ನೀಡಿದರು. `ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸದೇ ಸಹಕಾರ ನೀಡಬೇಕು. ಸುರಕ್ಷಿತವಾಗಿ ವಾಹನ ಚಲಾಯಿಸಬೇಕು’ ಎಂದು ಅವರು ಮನವಿ ಮಾಡಿದರು. PSI ಸಿದ್ದಪ್ಪ ಗುಡಿ ಅವರು ಹಾಜರಿದ್ದರು.