ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತರ ಕನ್ನಡ ಸಂಸದರಾಗಿ ಇದೀಗ ಒಂದು ವರ್ಷ. ಹೀಗಾಗಿ ಅವರು ಹರ್ಷವ್ಯಕ್ತಪಡಿಸಿದ್ದು, ಒಂದು ವರ್ಷದ ಆಗು-ಹೋಗುಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಆರು ಬಾರಿ ವಿಧಾನಸಭೆಯ ಸದಸ್ಯರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 2024ರ ಜೂನ್ 4ರಂದು ರಾಜ್ಯ ರಾಜಕಾರಣದಿಂದ ದೂರವಾದರು. ಆ ದಿನ ಅವರು ಅಧಿಕೃತವಾಗಿ ಕೇಂದ್ರ ರಾಜಕೀಯಕ್ಕೆ ಕಾಲಿರಿಸಿದರು. 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿAದ ಗೆಲುವು ಸಾಧಿಸಿ ಅವರು ದೆಹಲಿ ಸಂಸತ್ ಭವನದಲ್ಲಿ ತಮ್ಮ ಖುರ್ಚಿ ಕಾಯ್ದಿರಿಸಿಕೊಂಡರು.
ವಿಧಾನಸಭೆ ಚುನಾವಣೆಗೆ 7ನೇ ಬಾರಿ ಸ್ಪರ್ಧಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭೀಮಣ್ಣ ನಾಯ್ಕರ ವಿರುದ್ಧ ಸೋಲು ಒಪ್ಪಿಕೊಂಡರು. ವಿಧಾನಸಭಾ ಚುನಾವಣೆ ಬಳಿಕ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಅವರನ್ನು ಬಿಜೆಪಿ ಮತ್ತೆ ಚುನಾವಣೆಗೆ ಕರೆಯಿತು. ಲೋಕಸಭೆಗೆ ಟಿಕೆಟ್ ನೀಡಿ, ಸ್ಪರ್ಧಿಸುವಂತೆ ಸೂಚಿಸಿತು. ಸೋಲಿನ ಕಾರಣಗಳ ಅರಿವಿದ್ದ ಕಾಗೇರಿ ಅವರು ಆ ತಪ್ಪು ಮರುಕಳಿಸದಂತೆ ಎಚ್ಚರಿಕೆಯಿಂದ ಜನರ ಜೊತೆ ಬೆರೆತರು. ಪರಿಣಾಮವಾಗಿ ಭಾರೀ ಅಂತರಗಳಿoದ ಲೋಕಸಭೆಯಲ್ಲಿ ಗೆಲುವು ಸಾಧಿಸಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ ಸಂದರ್ಭದಲ್ಲಿ ಹಲವು ಟೀಕೆಗಳು ಕೇಳಿ ಬಂದಿದ್ದವು. ಅವರು ಗೆಲ್ಲುವುದಿಲ್ಲ ಎಂದು ಬಿಜೆಪಿಯ ಕೆಲವರೇ ಗುಲ್ಲು ಹಬ್ಬಿಸಿದ್ದರು. ಆ ವೇಳೆ ಬಿಜೆಪಿ ಎರಡು ಭಾಗವಾಗಿದ್ದು, ಎರಡುಕಡೆಯವರ ಮನ ಗೆಲ್ಲುವಲ್ಲಿ ಕಾಗೇರಿ ಯಶಸ್ವಿಯಾದರು. ಇದರೊಂದಿಗೆ ಜಿಲ್ಲೆಯ ಜನ ಸಹ ಅವರ ಕೈ ಹಿಡಿದು ನಡೆಸಿದರು. ಗೆದ್ದ ಒಂದೇ ವರ್ಷದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ 8 ವಿಧಾನಸಭಾ ಕ್ಷೇತ್ರಗಳ ಕಡೆ ಓಡಿದರು. ಸಾರ್ವಜನಿಕರ ಸೇವೆಗೆ ಸಿದ್ಧವಾಗಿ ಅವರು ಕೆಲಸ ಶುರು ಮಾಡಿದರು.
ಉತ್ತರ ಕನ್ನಡ ಜಿಲ್ಲೆಯ ಮೂಲಸೌಕರ್ಯ, ಸಂಪರ್ಕ, ಕೃಷಿ, ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಕಾಗೇರಿ ಅವರು ಮಹತ್ವದ ಬದಲಾವಣೆಗಾಗಿ ಶ್ರಮಿಸುತ್ತಿದ್ದಾರೆ. ಅವರ ಈ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಂ 66ರಲ್ಲಿ ಸಂಚಾರವನ್ನು ಸುಗಮಗೊಳಿಸಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಮೂರು ಪ್ರಮುಖ ಅಂಡರ್‌ಪಾಸ್‌ಗಳ ನಿರ್ಮಾಣಕ್ಕೆ ಅನುದಾನ ತಂದಿದ್ದಾರೆ. ಕಾಯ್ಕಿಣಿ ಅಂಡರ್‌ಪಾಸ್‌ಗೆ ರೂ 16.20 ಕೋಟಿ, ಮೂಡ ಭಟ್ಕಳ ಅಂಡರ್‌ಪಾಸ್‌ಗೆ ರೂ 10.50 ಕೋಟಿ, ಮತ್ತು ವಿಠಲ್ ಘಾಟ್ ಅಂಡರ್‌ಪಾಸ್‌ಗೆ ರೂ 13.60 ಕೋಟಿ ಮಂಜೂರಿ ಮಾಡಿಸಿದ್ದಾರೆ.
ರೈಲ್ವೆ ಸಂಪರ್ಕದ ವಿಷಯದಲ್ಲೂ ಕಾಗೇರಿ ಅವರು ಸಕ್ರಿಯರಾಗಿದ್ದಾರೆ. ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಸರ್ವೇ ಕಾರ್ಯಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಮಾಡಿದ್ದಾರೆ. ಇದು ಈ ಭಾಗದ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡುವ ಸಾಮರ್ಥ್ಯ ಹೊಂದಿದೆ. ದೂರಸಂಪರ್ಕ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಿರುವ ಕಾಗೇರಿ ಅವರು, ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 75 ಬಿಎಸ್‌ಎನ್‌ಎಲ್ ಟವರ್‌ಗಳ ಮಂಜೂರಾತಿ ಮಾಡಿಸಿದ್ದಾರೆ. ಇದರಿಂದಾಗಿ ಇಂಟರ್ನೆಟ್ ಸಂಪರ್ಕ ಮತ್ತು ಮೊಬೈಲ್ ನೆಟ್‌ವರ್ಕ್ ಲಭ್ಯತೆ ಸುಧಾರಿಸುವ ಆಶಾಭಾವನೆ ಮೂಡಿದೆ.
ಇನ್ನೂ ಸಂಕಷ್ಟದಲ್ಲಿರುವವರಿಗೆ ನೆರವಾಗುವಲ್ಲಿ ಕಾಗೇರಿ ಅವರ ಪಾತ್ರ ಮಹತ್ವದ್ದಾಗಿದೆ. ಇತ್ತೀಚೆಗೆ ನಡೆದ ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಜೀವ ಕಳೆದುಕೊಂಡವರು ಮತ್ತು ಗಾಯಗೊಂಡವರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿ ಯೋಜನೆಯಡಿ ವೈದ್ಯಕೀಯ ವೆಚ್ಚ ಮತ್ತು ಪರಿಹಾರ ಒದಗಿಸುವಲ್ಲಿ ಅವರು ನೆರವಾಗಿದ್ದಾರೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸೀ ಬರ್ಡ್ ನಿರಾಶ್ರಿತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಕಾಗೇರಿ ಅವರು ಯಶಸ್ವಿಯಾಗಿದ್ದಾರೆ. ಕ್ಷೇತ್ರದ ಆರ್ಥಿಕತೆಗೆ ಬೆನ್ನೆಲುಬಾಗಿರುವ ಕೃಷಿ ಮತ್ತು ವ್ಯಾಪಾರಕ್ಕೂ ಕಾಗೇರಿ ಒತ್ತು ನೀಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅದರಲ್ಲೂ, ಧಾರ್ಮಿಕ ಮಹತ್ವವುಳ್ಳ ಗೋಕರ್ಣವನ್ನು ಕಾಶಿಯಂತೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿರುವುದು ಗಮನಾರ್ಹ.
ಸಾಗರಮಾಲಾ ಯೋಜನೆಯಡಿ ಶಿರಸಿ-ಹಾವೇರಿ ರಸ್ತೆಯ ತುರ್ತು ದುರಸ್ತಿಗಾಗಿ ಹಣ ಮಂಜೂರು ಮಾಡಿಸಿರುವುದು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಅನುಕೂಲಕರವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾದ ಅಡಕೆ ಬೆಳೆ ಬಗ್ಗೆ ಕಾಗೇರಿ ಅವರು ಕಾಳಜಿವಹಿಸಿದ್ದಾರೆ. ಅಡಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಅಡಕೆ ಬೆಳೆಗಾರರು ಎದುರಿಸುತ್ತಿರುವ ಮಾರುಕಟ್ಟೆ ಸಮಸ್ಯೆಗಳು, ಬೆಂಬಲ ಬೆಲೆಯ ವಿಚಾರ, ಆಮದು ನೀತಿಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಅಡಕೆ ಬೆಳೆಗಾರರ ರಕ್ಷಣೆಗೆ ಸದಾ ಕೆಲಸ ಮಾಡುತ್ತಿದ್ದು, ಅವರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ರೈತರು ಎದುರಿಸಿದ ಪ್ರಮುಖ ಸಮಸ್ಯೆಗಳಲ್ಲಿ ಬೆಳೆ ವಿಮೆ ಒಂದಾಗಿದ್ದು, ಅದಕ್ಕೂ ಪರಿಹಾರ ಒದಗಿಸಿಕೊಟ್ಟಿದ್ದಾರೆ.