ಸರ್ಕಾರಿ ಶಾಲೆಗೆ ಅಪಾಯಕಾರಿ ರೀತಿಯಲ್ಲಿ ಮರದ ಕಂಬ ಬಳಸಿ ವಿದ್ಯುತ್ ಪೂರೈಸುತ್ತಿರುವ ಬಗ್ಗೆ ಜೂ 10ರ ಮಂಗಳವಾರ ವರದಿ ಪ್ರಕಟವಾಗಿದ್ದು, ಜೂ 12ರ ಗುರುವಾರ ಅಲ್ಲಿ ಸಿಮೆಂಟ್ ಕಂಬ ಅಳವಡಿಸಲಾಗಿದೆ. ಇದಕ್ಕೆ ಕಾರಣ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ, ಶಾಸಕ ಶಿವರಾಮ ಹೆಬ್ಬಾರ್, ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ, ಹೆಸ್ಕಾಂ ಅಧಿಕಾರಿ ರಮಾಕಾಂತ ನಾಯ್ಕ ಹಾಗೂ ನಾವು.. ನಮ್ಮೊಂದಿಗೆ ನೀವು!
ಯಲ್ಲಾಪುರದ ಕಿರವತ್ತಿ ಫಾರೆಸ್ಟ್ ನಾಕಾ ಶಾಲೆಗೆ ಹಿಂದಿನಿoದಲೂ ಮರದ ಕಂಬ ಬಳಸಿ ಅದರ ಮೂಲಕ ವಿದ್ಯುತ್ ತಂತಿ ಎಳೆಯಲಾಗಿತ್ತು. ಆ ಮರದ ಕಂಬ ಪೊಳ್ಳಾಗಿದ್ದು, ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದರೆ ಅಪಾಯ ಸಾಧ್ಯತೆ ಹೆಚ್ಚಿತ್ತು. ಈ ಬಗ್ಗೆ ಶಾಲಾ ಮುಖ್ಯಾಧ್ಯಾಪಕಿ ಮೀಲಾ ಬೋರ್ಕಿಸ್ ಹೆಸ್ಕಾಂ ಕಚೇರಿಗೆ ಪತ್ರ ಬರೆದಿದ್ದರು. ಕೆಲಸವಾಗದ ಕಾರಣ ಶಿಕ್ಷಣಾಧಿಕಾರಿ ಕಚೇರಿಗೂ ಪತ್ರ ಬರೆದು ಸಮಸ್ಯೆ ಬಗ್ಗೆ ವಿವರಿಸಿದ್ದರು. ಶಿಕ್ಷಣಾಧಿಕಾರಿ ಕಚೇರಿಯಿಂದಲೂ ಹೆಸ್ಕಾಂ ಕಚೇರಿಗೆ ಪತ್ರ ಬರೆಯಲಾಗಿದ್ದು, ಸಿಮೆಂಟ್ ಕಂಬ ಅಳವಡಿಸುವಂತೆ ಕೋರಲಾಗಿತ್ತು. ಆದರೆ, ಪತ್ರ ಸಮರದಲ್ಲಿಯೇ ಸಮಯ ಕಳೆದುಹೋಗುತ್ತಿದ್ದರಿಂದ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.
ಈ ನಡುವೆ ಶಾಲೆ ಸುರಕ್ಷತೆಯ ಬಗ್ಗೆ ಮುಖ್ಯಾಧ್ಯಾಪಕಿ ಮೀಲಾ ಬೋರ್ಕಿಸ್ ಅವರು ಶಾಸಕ ಶಿವರಾಮ ಹೆಬ್ಬಾರ್ ಅವರ ಗಮನಕ್ಕೆ ತಂದಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಅವರು ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಹೆಸ್ಕಾಂ ಅಧಿಕಾರಿಗಳ ಜೊತೆ ಮಾತನಾಡಿದ್ದರು. ಆ ವೇಳೆಯಲ್ಲಿಯೂ ಹೆಸ್ಕಾಂ ಅಧಿಕಾರಿಗಳು ಶಾಲೆಯ ಕಂಬ ಪರಿಶೀಲನೆ ಮಾಡಿದ್ದರು. ಪರಿಸ್ಥಿತಿಯ ಬಗ್ಗೆ ಪತ್ರ ಸಮರ ಮುಂದುವರೆದಿದ್ದು, ಈ ನಡುವೆ ಮೊಬೈಲ್ ಮಿಡಿಯಾ ನೆಟ್‌ವರ್ಕ ಅಧೀನದ S News ಡಿಜಿಟಲ್ ಪ್ರತಿನಿಧಿ ಶಾಲೆಗೆ ಭೇಟಿ ನೀಡಿ ವರದಿ ಮಾಡಿದ್ದರು. ಶಾಲೆಯ ಪರಿಸ್ಥಿತಿ ಹಾಗೂ ಮಕ್ಕಳು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ `ಬಡ ಮಕ್ಕಳ ಶಾಲೆಗೆ ವಿದ್ಯುತ್ ಅಪಾಯ: ಸರ್ಕಾರಿ ಕೆಲಸಕ್ಕೂ ಕಾಸು ಕೇಳುವ ಹೆಸ್ಕಾಂ ಅಧಿಕಾರಿ!’ ಎಂಬ ತಲೆಬರಹದ ಅಡಿ ವರದಿ ಪ್ರಸಾರವಾಗಿತ್ತು. ಸಾಕಷ್ಟು ಓದುಗರು ಈ ವರದಿಗೆ ಸ್ಪಂದಿಸಿ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದ್ದರು. ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಈ ವರದಿಗೆ ಸ್ಪಂದಿಸಿ, ಸಮಸ್ಯೆಗೆ ಸ್ಪಂದಿಸುವುದಾಗಿ ವಾಟ್ಸಪ್ ಸಂದೇಶ ರವಾನಿಸಿದ್ದರು.
ಇದನ್ನು ಓದಿ: `ಬಡ ಮಕ್ಕಳ ಶಾಲೆಗೆ ವಿದ್ಯುತ್ ಅಪಾಯ: ಸರ್ಕಾರಿ ಕೆಲಸಕ್ಕೂ ಕಾಸು ಕೇಳುವ ಹೆಸ್ಕಾಂ ಅಧಿಕಾರಿ!’
ಅದಾದ ನಂತರ ಮಕ್ಕಳ ಸುರಕ್ಷತೆ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತವೂ ಕಾಳಜಿವಹಿಸಿದ್ದು, ಯಲ್ಲಾಪುರದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಮಾಕಾಂತ ನಾಯ್ಕ ಕಡತ ಪರಿಶೀಲನೆ ನಡೆಸಿದರು. `ಶಾಸಕ ಶಿವರಾಮ ಹೆಬ್ಬಾರ್ ಸಹ ಮಕ್ಕಳ ಸುರಕ್ಷತೆಗಾಗಿ ಕೂಡಲೇ ಕಂಬ ಬದಲಿಸಬೇಕು’ ಎಂದು ತಾಕೀತು ಮಾಡಿದರು. ಶಿಕ್ಷಣ ಇಲಾಖೆಯವರು ನೀಡಿದ ಅರ್ಜಿ ಪರಿಶೀಲಿಸಿ ಅಧೀನ ಅಧಿಕಾರಿಗಳಿಂದ ತುರ್ತು ಕೆಲಸ ಶುರು ಮಾಡಿಸಿದರು. ಅದರ ಪ್ರಕಾರ ಜೂ 12ರಂದು ಕಿರವತ್ತಿಯ ಪಾರೆಸ್ಟ್ನಾಕಾದಲ್ಲಿದ್ದ ಶಾಲೆಗೆ ಸಿಮೆಂಟ್ ಕಂಬ ಅಳವಡಿಸಲಾಗಿದೆ. ಜೊತೆಗೆ ಆ ಶಾಲೆಗೆ ಸುರಕ್ಷಿತ ಮಾರ್ಗದಲ್ಲಿ ವಿದ್ಯುತ್ ಸರಬರಾಜು ನಡೆದಿದೆ.