ಕರಾವಳಿ ಭಾಗದಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು. ಆದರೆ, ಈ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ ಎಂದು ಯಾರು ಊಹಿಸಿರಲಿಲ್ಲ. ಗುರುವಾರ ಸುರಿದ ಮಳೆಗೆ ಜಿಲ್ಲಾಕೇಂದ್ರದಲ್ಲಿನ ವಿವಿಧ ಸರ್ಕಾರಿ ಕಚೇರಿಗಳಿಗೂ ನೀರು ನುಗ್ಗಿದ್ದು, ಅನೇಕರ ಮನೆಯ ಪೀಠೋಪಕರಣಗಳು ಹಾಳಾದವು. ಸಾರ್ವಜನಿಕ ಓಡಾಟದ ರಸ್ತೆಗಳು ನೀರಿನಲ್ಲಿ ಮುಳುಗಿದ್ದವು!
ಕಾರವಾರ ಸೇರಿ ಕರಾವಳಿ ಪ್ರದೇಶದಲ್ಲಿ ಜೂನ್ 12ರಂದು ಗರಿಷ್ಠ 65ಮಿಮೀ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿತ್ತು. ಆದರೆ, ಕರಾವಳಿ ಭಾಗದಲ್ಲಿ ಗರಿಷ್ಠ 268ಮಿಮೀ ಪ್ರಮಾಣದಲ್ಲಿ ಮಳೆ ಸುರಿಯಿತು. ಈ ಬಗ್ಗೆ ಮುನ್ನಚ್ಚರಿಕೆ ಸ್ವೀಕರಿಸಿದ್ದ ಜಿಲ್ಲಾಡಳಿತ ಮಧ್ಯರಾತ್ರಿ ತುರ್ತು ಆದೇಶ ಹೊರಡಿಸಿ ಕರಾವಳಿ ಭಾಗದ ಶಾಲೆಗಳಿಗೆ ರಜೆ ಘೋಷಿಸಿತ್ತು. ಪರಿಣಾಮ ಮಕ್ಕಳು ಶಾಲೆಗೆ ಬಂದು ಪರಿತಪಿಸುವುದು ತಪ್ಪಿತು. ಅದಾಗಿಯೂ, ಮನೆಯಿಂದ ಹೊರಗೆ ಬಂದ ಜನರು ಮಳೆಯಿಂದ ಸಂಕಷ್ಟ ಅನುಭವಿಸಿದರು.
ಕಾರವಾರದ ವೈಲವಾಡದಲ್ಲಿ ಗರಿಷ್ಠ ಪ್ರಮಾಣದ ಮಳೆ ಸುರಿದಿದೆ. ಅಲ್ಲಿ ನಿರಂತರವಾಗಿ 267ಮಿಮೀ ಮಳೆಯಾಗಿದೆ. ಅದರೊಂದಿಗೆ ಕರಾವಳಿಯ ಎಲ್ಲಾ ತಾಲೂಕುಗಳಲ್ಲಿಯೂ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ನೂರಾರು ವಾಹನಗಳು ಮಳೆ ನೀರಿನಲ್ಲಿ ಸಿಲುಕಿ ಗ್ಯಾರೇಜಿಗೆ ಬಂದಿವೆ. ಮನೆಯೊಳಗೆ ನೀರು ನುಗ್ಗಿದ್ದರಿಂದ ಜನರು ಕಂಗಾಲಾಗಿದ್ದಾರೆ. ಜಿಲ್ಲಾಸ್ಪತ್ರೆಯ ಆವರಣದೊಳಗೂ ಮಳೆ ನೀರು ನುಗ್ಗಿದ್ದು, ರೋಗಿಗಳು ಹಿಂಸೆ ಅನುಭವಿಸುತ್ತಿದ್ದಾರೆ. ನೀರು ಹೊರ ಹಾಕಲು ಸಿಬ್ಬಂದಿ ಸಾಹಸ ನಡೆಸಿದ್ದಾರೆ.
ಕಾರವಾರದ ಸಾಯಿಕಟ್ಟಾ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹಬ್ಬುವಾಡ ರಸ್ತೆಯಲ್ಲಿ ಹೋಗಲು ಸಾಧ್ಯವಿಲ್ಲ. ಬಿಣಗಾ ಹೆದ್ದಾರಿ ಸೇರಿ ಅನೇಕ ಕಡೆ ಬೈಕು-ಕಾರುಗಳು ನೀರಿನಲ್ಲಿ ಸಿಕ್ಕಿ ಬಿದ್ದಿವೆ. ಅಲ್ಲಲ್ಲಿ ಮನೆಗಳ ಮೇಲೆ ಮರ ಬಿದ್ದಿದೆ. ಅಪಾರ್ಟಮೆಂಟ್ ಪಾರ್ಕಿಂಗ್ ಪ್ರದೇಶಗಳು ಜಲಾವೃತಗೊಂಡಿದೆ. ಅಪಾರ್ಟಮೆಂಟಿನಲ್ಲಿರಿಸಿದ್ದ ಕಾರುಗಳು ನೀರಿನಲ್ಲಿ ಮುಳುಗಿದ್ದು, ಅದನ್ನು ಹೊರತೆಗೆಯುವ ಸಾಹಸ ಮುಂದುವರೆದಿದೆ. ನಾಲಾಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಸ್ತೆ ಪಕ್ಕದ ಅಂಗಡಿಗಳಿಗೂ ನೀರು ನುಗ್ಗಿದೆ. ಕಾರವಾರದ ಕೋಳಿ ಅಂಗಡಿಗೆ ನೀರು ನುಗ್ಗಿ ಕೋಳಿಗಳೆಲ್ಲವೂ ಸಾವನಪ್ಪಿದೆ. ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲ. ಪಂಪ್ ಮೂಲಕ ನೀರು ಹೊರಗೆ ಸಾಗಿಸುವ ಕೆಲಸ ನಡೆಯುತ್ತಿದೆ. ತಗ್ಗು ಪ್ರದೇಶದಲ್ಲಿನ ಜನ ಗಾಳಿ-ಮಳೆ-ಚಳಿಗೆ ನಲುಗಿದ್ದಾರೆ.