ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ 5 ತಾಲೂಕಿನ ಶಾಲೆ-ಅಂಗನವಾಡಿಗಳಿಗೆ ಜೂನ್ 12ರಂದು ರಜೆ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆ ಹಾಗೂ ಮುನ್ನಚ್ಚರಿಕೆ ಸಲುವಾಗಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಮಧ್ಯರಾತ್ರಿ ಈ ಆದೇಶ ಹೊರಡಿಸಿ, ಕಡತಕ್ಕೆ ಸಹಿ ಮಾಡಿದ್ದಾರೆ.
ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಘಟಕ ಮಳೆ ಬರುವ ಬಗ್ಗೆ ಮಾಹಿತಿ ನೀಡಿದೆ. ಅದರಲ್ಲಿಯೂ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ದೊಡ್ಡ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ತಾಲೂಕಿನ ಶಾಲೆಗಳಿಗೆ ಮಳೆ ರಜೆ ಅನ್ವಯ ಆಗಲಿದೆ.
ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾತ್ರ ಈ ರಜೆ ಘೋಷಿಸಲಾಗಿದೆ. ಕಾಲೇಜುಗಳಿಗೆ ರಜೆ ಇಲ್ಲ. ಮಲೆನಾಡು ಭಾಗದ ಶಾಲೆಗಳಿಗೆ ಸಹ ಈ ರಜೆ ಇಲ್ಲ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ಹಾಗೂ ದಾಂಡೇಲಿಯ ಮಕ್ಕಳು-ಶಿಕ್ಷಕರು ಈ ದಿನ ಶಾಲೆಗೆ ಬರುವುದು ಅನಿವಾರ್ಯ.
ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದ ಪ್ರಕಾರ ಕರಾವಳಿ ಭಾಗದ ಖಾಸಗಿ ಶಾಲೆಗಳಿಗೂ ಜೂನ್ 12ರಂದು ರಜೆ ನಿಯಮ ಅನ್ವಯ. ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ರಜೆ ಅವಧಿಯ ಪಾಠವನ್ನು ಮುಂದಿನ ದಿನದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಡೀಸಿ ಸೂಚಿಸಿದ್ದಾರೆ.
