ಕೊಬರಿ, ತೆಂಗಿನ ಕಾಯಿ ಹಾಗೂ ಎಳನೀರಿನ ದರ ಏರಿಕೆಯಾದ ಈ ಕಾಲಘಟ್ಟದಲ್ಲಿ ತೆಂಗಿನ ಚಿಪ್ಪಿಗೂ ಬೇಡಿಕೆ ಬಂದಿದೆ. TSS ಸಂಸ್ಥೆ ತೆಂಗಿನ ಚಿಪ್ಪು ಖರೀದಿ ಯೋಜನೆ ಘೋಷಿಸಿದೆ.
ತೆಂಗಿನ ಚಿಪ್ಪನ್ನು ಪ್ರಮುಖವಾಗಿ ಇದ್ದಲು ತಯಾರಿಕೆಗೆ ಬಳಸುತ್ತಾರೆ. ಹೀಗಾಗಿ ಹೆಚ್ಚು ತೆಂಗು ಬೆಳೆಯುವ ತಮಿಳುನಾಡು ಹಾಗೂ ಕೇರಳದಲ್ಲಿಯೂ ಚಿಪ್ಪಿಗೆ ಬರ ಉಂಟಾಗಿದೆ. ಹೊರ ರಾಜ್ಯಗಳಲ್ಲಿ ಸಿಗುವ ಚಿಪ್ಪಿನಿಂದ ತಯಾರಾಗುವ ಇದ್ದಿಲಿನಲ್ಲಿ ಇಂಗಲದ ಪ್ರಮಾಣ ಶೇ 80ಕ್ಕಿಂತ ಕಡಿಮೆಯಿದ್ದು, ಕರ್ನಾಟಕದಲ್ಲಿ ಸಿಗುವ ಇದ್ದಿಲಿನಲ್ಲಿ ಶೇ 95ಕ್ಕೂ ಅಧಿಕ ಪ್ರಮಾಣದ ಇಂಗಾಲದ ಅಂಶವಿರುವುದು ಗೊತ್ತಾಗಿದೆ. ಹೀಗಾಗಿ ಬೇರೆ ಬೇರೆ ರಾಜ್ಯಗಳಲ್ಲಿಯೂ ಕರ್ನಾಟಕದ ತೆಂಗಿನ ಚಿಪ್ಪಿಗೆ ಬೇಡಿಕೆ ಬಂದಿದೆ.
ಇಲ್ಲಿನ ತೆಂಗಿನ ಚಿಪ್ಪು ರಾಜಸ್ತಾನ, ತಮಿಳುನಾಡು, ಗುಜರಾತ್ ಕಡೆ ರಪ್ತಾಗುತ್ತದೆ. ಗಾತ್ರಕ್ಕೆ ಅನುಗುಣವಾಗಿ ವರ್ತಕರು ಚಿಪ್ಪು ಖರೀದಿಸುತ್ತಾರೆ. ಅದನ್ನು ಚನ್ನಾಗಿ ತೊಳೆದು ಒಣಗಿಸಿ ಹೊರ ರಾಜ್ಯಗಳಿಗೆ ರವಾನಿಸುತ್ತಾರೆ. ಚಿಕ್ಕ ಗಾತ್ರದ ಚಿಪ್ಪುಗಳನ್ನು ಗೋಡೆಗೆ ಬಡಿಯುವ ಬಣ್ಣ, ಮುಖಕ್ಕೆ ಹಚ್ಚುವ ಕ್ರೀಂ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ. ಇದ್ದಿಲಿನ ನೀರು ಫಿಲ್ಟರ್ ತಯಾರಿಕೆಗೆ ಸಹ ತೆಂಗಿನ ಚಿಪ್ಪು ಅಗತ್ಯ.
ಹೀಗಾಗಿ ಇದ್ದಿಲು ತಯಾರಿಸುವ ಕೇಂದ್ರಗಳ ಬಳಿ ಕಳೆದ ವರ್ಷ ತೆಂಗಿನ ಚಿಪ್ಪಿನ ಪ್ರತಿ ಕೆಜಿಗೆ 8ರೂ ದರವಿತ್ತು. ಒಮ್ಮೆ ಪ್ರತಿ ಕೆಜಿಗೆ 26ರೂವರೆಗೆ ಏರಿಕೆಯಾಗಿದ್ದು, ನಂತರ ಹಾಸನ-ತುಮಕೂರಿನ ಮಾರುಕಟ್ಟೆಯಲ್ಲಿ 30ರೂವರೆಗೆ ತಲುಪಿತ್ತು. ಸದ್ಯ ಟಿಎಸ್‌ಎಸ್ ಇದೀಗ ಪ್ರತಿ ಕೆಜಿಗೆ 14 ರೂ ದರದಲ್ಲಿ ತೆಂಗಿನ ಚಿಪ್ಪು ಖರೀದಿಸಲು ನಿರ್ಧರಿಸಿದೆ. ಅದಾಗಿಯೂ ಅಗತ್ಯವಿದ್ದವರಿಗೆ ಬೇಡಿಕೆಗೆ ತಕ್ಕ ಚಿಪ್ಪು ಸಿಗುತ್ತಿಲ್ಲ. ಹೀಗಾಗಿ ಭವಿಷ್ಯದಲ್ಲಿ ತೆಂಗಿನ ಚಿಪ್ಪಿನ ಧಾರಣೆ ಇನ್ನಷ್ಟು ಏರಿಕೆಯಾದರೂ ಅಚ್ಚರಿಯಿಲ್ಲ.
ಗ್ರಾಮೀಣ ಭಾಗದಲ್ಲಿ ಬೆಂಕಿ ಉರಿಸಲು ಮೊದಲು ತೆಂಗಿನ ಚಿಪ್ಪು ಬಳಸುತ್ತಿದ್ದರು. ಈಚೆಗೆ ಎಲ್ಲಡೆ ಬಾಯ್ಲರ್ ಬಂದಿದ್ದು, ಅದಕ್ಕೆ ತೆಂಗಿನ ಚಿಪ್ಪು ಬಳಸುವವರ ಸಂಖ್ಯೆ ಕಡಿಮೆ. ಹೀಗಾಗಿ `ಇನ್ಮುಂದೆ ತೆಂಗಿನ ಚಿಪ್ಪು’ ಎಂದು ಮೂಗು ಮುರಿಯಬೇಡಿ… ಅದನ್ನು ಮಾರಾಟ ಮಾಡಿ ಕಾಸು ಸಂಪಾದಿಸಿ!