ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಶಾಸಕ ಸತೀಶ್ ಸೈಲ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಸಂಘದ ನೂತನ ಅಧ್ಯಕ್ಷರಾದ ವಿಜಯ್ ಬಿಳಿಯೇ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಮಾಧವ ನಾಯಕ ಅವರೊಂದಿಗೆ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಶಾಸಕ ಸೈಲ್ ಅವರನ್ನು ಭೇಟಿಯಾದರು. ಈ ವೇಳೆ ಹಾಲಿ ಹಾಗೂ ನಿಕಟಪೂರ್ವ ಅಧ್ಯಕ್ಷರಿಗೆ ಶಾಸಕರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿದರು.
ಹಲವು ವಿಚಾರಗಳ ಚರ್ಚೆ:
ಭೇಟಿಯ ವೇಳೆ ಗುತ್ತಿಗೆದಾರರಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳು ಹಾಗೂ ಗುತ್ತಿಗೆದಾರರು ಅದರ ವಿರುದ್ಧ ನಡೆಸಿದ ಪ್ರತಿಭಟನೆಗಳು, ಇಂದಿನ ಸರ್ಕಾರದಲ್ಲಿ ಗುತ್ತಿಗೆದಾರರು ಬಿಲ್ ಪಾವತಿಯಾಗದೆ ಆನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕರು, ಗುತ್ತಿಗೆದಾರರು ಟೆಂಡರ್ ಪ್ರೀಮಿಯಂ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಟೆಂಡರ್ ಪಡೆಯಬೇಡಿ. ಕಾರವಾರದವರು ಕಾರವಾರದಲ್ಲೇ, ಅಂಕೋಲಾದವರು ಅಂಕೋಲದಲ್ಲೇ ಕೆಲಸ ಮಾಡುವಂತಾಗಬೇಕು. ಹೊರಗಡೆಯಿಂದ ಯಾರೂ ಟೆಂಡರ್ ಪಡೆಯದೇ, ಸ್ಥಳೀಯರೇ ಗುತ್ತಿಗೆ ಕಾಮಗಾರಿಗಳನ್ನು ಮಾಡುವಂತಾಗಬೇಕು ಎಂದರು.
ನಗರಸಭೆ ಪೌರಾಯುಕ್ತರಾದ ಜಗದೀಶ್, ಎಇಇ ಸದಾನಂದ ಅವರನ್ನು ಕರೆಯಿಸಿದ ಶಾಸಕರು, ಎಲ್ಲಾ ಗುತ್ತಿಗೆದಾರರ ಬಾಕಿ ಪಾವತಿಯನ್ನು ಹಂತ ಹಂತವಾಗಿ ಪಾವತಿಸಲು ಸೂಚಿಸಿದರು. ಸದ್ಯದಲ್ಲೇ ಮತ್ತೊಮ್ಮೆ ಗುತ್ತಿಗೆದಾರರ ಸಭೆ ಕರೆಯುವುದಾಗಿಯೂ ತಿಳಿಸಿದರು. ನಿಮ್ಮೊಂದಿಗೆ ನಾನಿದ್ದೇನೆ. ಸಂಘ ಉತ್ತಮವಾಗಿ ನಡೆಯಲಿ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೂ ನಿಮ್ಮ ಕೊಡುಗೆ ಹೀಗೆ ಮುಂದುವರಿಯಲಿ ಎಂದು ಸೈಲ್ ಆಶಿಸಿದರು.

ಉದ್ಯಮಿಗಳಾದ ಮಂಗಲದಾಸ್ ಕಾಮತ್ ಅವರಿಗೆ ಮಾಧವ ನಾಯಕ ಅವರು ಧನ್ಯವಾದ ಸಮರ್ಪಿಸಿದರು. ಕಾಮತ್ ಅವರು ಕೇವಲ ಉದ್ಯಮಿಗಳಾಗಿರದೆ, ಮಾನವೀಯ ಮೌಲ್ಯಗಳನ್ನು ಉಳ್ಳವರೂ ಆಗಿದ್ದಾರೆ. ಬಿಲ್ ಪಾವತಿಯಾಗದೆ ಪರಿತಪಿಸುತ್ತಿರುವ ಅದೆಷ್ಟೋ ಗುತ್ತಿಗೆದಾರರಿಗೆ ಆರ್ಥಿಕವಾಗಿ ಅವರು ನೆರವಾಗಿರುವುದಲ್ಲದೆ, ಕಚ್ಚಾ ಸಾಮಾಗ್ರಿಗಳನ್ನು ಪೂರೈಸಿ, ಅದರ ಪಾವತಿ ತಡವಾದರೂ ಯಾವ ಗುತ್ತಿಗೆದಾರರಿಗೂ ಕಿರಿಕಿರಿ ಮಾಡದೇ ಸೌಹಾರ್ದತೆ ಕಾಯ್ದುಕೊಂಡು ಬಂದಿದ್ದಾರೆ ಎಂದರು.
ಜಿಲ್ಲಾಧ್ಯಕ್ಷರಾದ ಧೀರು ಶಾನಭಾಗ, ಪ್ರಮುಖರಾದ ಛತ್ರಪತಿ ಮಾಳಸೇಕರ, ಪ್ರೀತಂ ಮಾಸೂರಕರ, ಶುಭಂ ಕಳಸ, ಸಂತೋಷ್ ಸೈಲ, ಸತೀಶ್ ನಾಯ್ಕ, ಸಿದ್ದಾರ್ಥ ನಾಯಕ, ನಾಗರಾಜ್ ದುರ್ಗೇಕರ್, ರಾಮನಾಥ ನಾಯ್ಕ, ಮುರಳಿ ಗೋವೇಕರ, ದತ್ತ ಗುನಗಿ, ರವೀಂದ್ರ ಕೇರಕರ್, ರೋಹಿದಾಸ, ಪ್ರಸಾದ ಕಾಣೇಕರ್, ಸುನಿಲ್ ಸೈಲ್, ಮಹೇಶ್ ತಾಮಸೇ, ರಾಮ ಜೋಶಿ, ಸುಧೀರ್ ಸಾರಂಗ, ಕೃಷ್ಣಾನಂದ ನಾಯ್ಕ, ಭೋಜರಾಜ್ ಸೇರಿದಂತೆ ಹಲವು ಗುತ್ತಿಗೆದಾರರು ಇದ್ದರು.