ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲೆಯ ಎಂಟು ತಾಲೂಕಿನ ಶಾಲೆ-ಅಂಗನವಾಡಿಗಳಿಗೆ ಜೂನ್ 17ರಂದು ರಜೆ ಘೋಷಿಸಲಾಗಿದೆ.
ಜೂನ್ 17ರವರೆಗೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನಲೆ ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರದ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಸದ್ಯ ಜೂನ್ 17ರ ಒಂದು ದಿನಕ್ಕೆ ಮಾತ್ರ ಸೀಮಿತವಾಗಿ ರಜೆ ಘೋಷಣೆಯಾಗಿದೆ.
ಮಳೆಯಿಂದ ಮಕ್ಕಳಿಗೆ ಆಗುವ ಸಮಸ್ಯೆ ಕುರಿತು ಶಿಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಹೀಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆಯವರ ಮೂಲಕ ರಜೆ ಮಾಹಿತಿಯನ್ನು ಮಕ್ಕಳ ಪಾಲಕರಿಗೆ ತಿಳಿಸಲು ಸೂಚಿಸಲಾಗಿದೆ. ರಜಾ ಅವಧಿಯ ಪಠ್ಯವನ್ನು ಮುಂದಿನ ದಿನದಲ್ಲಿ ಹೊಂದಾಣಿಕೆ ಮಾಡಿಕೊಂಡು ಪಾಠ ಮಾಡಬೇಕು ಎಂದು ಡೀಸಿ ಸೂಚಿಸಿದ್ದಾರೆ.
ಹಳಿಯಾಳ, ದಾಂಡೇಲಿ, ಜೊಯಿಡಾ, ಮುಂಡಗೋಡು ತಾಲೂಕಿಗೆ ಈ ರಜೆ ನಿಯಮ ಅನ್ವಯವಾಗುವುದಿಲ್ಲ. ಕಾಲೇಜುಗಳಿಗೆ ಸಹ ರಜೆ ಇಲ್ಲ.