ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಮಡಿದ ರಷ್ಯಾದ ಯೋಧ ಸೆರ್ಗಯ್ ಗ್ರಾಬ್ಲವ್ ಅವರಿಗೆ ಗೋಕರ್ಣದಲ್ಲಿ ಮುಕ್ತಿ ಸಿಕ್ಕಿದೆ. ನಾರಾಯಣ ಬಲಿ ಕಾರ್ಯ ನಡೆಸಿ ಯೋಧ ಸೆರ್ಗಯ್ ಗ್ರಾಬ್ಲವ್ ಅವರಿಗೆ ಮೋಕ್ಷ ಸಿಗಲಿ ಎಂದು ಪ್ರಾರ್ಥಿಸಲಾಗಿದೆ.
ದಶಕದ ಹಿಂದೆ ಭಾರತಕ್ಕೆ ಬಂದಿದ್ದ ರಷ್ಯಾದ ಯೋಧ ಸೆರ್ಗಯ್ ಗ್ರಾಬ್ಲವ್ ಇಲ್ಲಿನ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆ ಪ್ರೀತಿ ಅವರನ್ನು ಗೋಕರ್ಣಕ್ಕೆ ಕರೆತಂದಿತು. ಹಿಂದುತ್ವದ ಕಡೆ ಆಕರ್ಷಣೆ ಹೊಂದಿದ ಅವರು ವಾರಣಾಸಿಯಲ್ಲಿ ಕಾಲ ಕಳೆದಿದ್ದರು. ಅಲ್ಲಿ ವೇದ ಮಂತ್ರಗಳ ಜೊತೆ ಸಂಸ್ಕೃತವನ್ನು ಅಧ್ಯಯನ ಮಾಡಿದ್ದರು. ಅದಾದ ನಂತರ ಸ್ವತಃ ಹೋಮ-ಹವನ ಮಾಡುವಷ್ಟು ಪ್ರಾವೀಣ್ಯತೆಪಡೆದಿದ್ದರು.
ಸೆರ್ಗೆಯ್ ಬಾಬಾ ಆಗಿ ಬದಲಾಗಿದ್ದ ಸೆರ್ಗಯ್ ಗ್ರಾಬ್ಲವ್ ಗೋಕರ್ಣವನ್ನು ನೆಚ್ಚಿಕೊಂಡಿದ್ದರು. ಭಾರತಕ್ಕೆ ಭೇಟಿ ನೀಡಿದಾಗಲೆಲ್ಲ ಅವರು ಗೋಕರ್ಣಕ್ಕೆ ಬರುತ್ತಿದ್ದರು. 18 ವರ್ಷಗಳಿಂದ ಗೋಕರ್ಣದ ಒಡನಾಟ ಹೊಂದಿದ ಅವರು ಸಾವಿರಕ್ಕೂ ಅಧಿಕ ಭಕ್ತರನ್ನು ಸಂಪಾದಿಸಿದ್ದರು. ಸೇನೆ ತೊರೆದಿದ್ದ ಅವರು ರಷ್ಯಾ-ಉಕ್ರೇನ್ ಯುದ್ಧ ಘೋಷಣೆ ಆದ ಕೂಡಲೇ ಮತ್ತೆ ಸೈನ್ಯ ಸೇರಿದ್ದರು.
ಏಪ್ರಿಲ್ 26ರಂದು ಅವರು ಯುದ್ಧದಲ್ಲಿ ಮಡಿದರು. ಹೀಗಾಗಿ ಅವರಿಗೆ ಗೋಕರ್ಣದಲ್ಲಿ ಪಿಂಡ ಪ್ರಧಾನ ಮಾಡಲಾಗಿದೆ. ಈ ಬಗ್ಗೆ ಅವರ ಒಡನಾಡಿ ಪರಮೇಶ್ವರ ಶಾಸ್ತಿ ಮಾಹಿತಿ ಹಂಚಿಕೊoಡಿದ್ದಾರೆ.