ಈಗಾಗಲೇ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಿರಸಿಯ ಪತ್ರಕರ್ತ ರವೀಶ ಹೆಗಡೆ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ. ವಂಚನೆಗೆ ಒಳಗಾದ ಚಿಪಗಿಯ ದಿನೇಶ ಚಿಂಚ್ರೇಕರ್ ಪೊಲೀಸ್ ದೂರು ನೀಡಿದ್ದಾರೆ.
ಚಿಪಗಿಯ ಮಹಾಬಲೇಶ್ವರ ಹೆಗಡೆ ಅವರ ಜೊತೆ ಚಿಪಗಿ ಲಂಡಕನಳ್ಳಿಯ ದಿನೇಶ ಚಿಂಚ್ರೆಕರ್ ಅವರು ಅಡಿಕೆ ವಕಾರಿ ನಡೆಸುವ ಮಾತುಕಥೆ ಮಾಡಿದ್ದರು. ಇದಕ್ಕಾಗಿ ದಿನೇಶ ಚಿಂಚ್ರೇಕರ್ ಅವರ ಭೂಮಿ ಮೇಲೆ ಯಲ್ಲಾಪುರದ ಉಮ್ಮಚ್ಗಿಯ ಶ್ರೀಮಾತಾ ಸೊಸೈಟಿಯಲ್ಲಿ ಸಾಲಪಡೆಯಲಾಗಿದ್ದು, ಮಹಾಬಲೇಶ್ವರ ಹೆಗಡೆ ಸಾಲ ಪಡೆದಿದ್ದು, ಅದನ್ನು ಮರು ಪಾವತಿ ಮಾಡಿರಲಿಲ್ಲ.
ಸಾಕಷ್ಟು ಸಲ ಕೇಳಿಕೊಂಡರೂ ಮಹಾಬಲೇಶ್ವರ ಹೆಗಡೆ ಹಣವನ್ನು ಸೊಸೈಟಿಗೆ ಹಣ ನೀಡಿರಲಿಲ್ಲ. ಆಗ ಚಿಪಗಿಯ ಮಹಾಬಲೇಶ್ವರ ಹೆಗಡೆ ಅವರ ಸಂಬoಧಿ ಎಂದು ಪರಿಚಯಿಸಿಕೊಂಡ ಪತ್ರಕರ್ತ ರವೀಶ ಹೆಗಡೆ `ಆ ಸಾಲದ ಸಂಪೂರ್ಣ ಜವಾಬ್ದಾರಿ ನನ್ನದು’ ಎಂಬ ಭರವಸೆ ನೀಡಿದ್ದರು. ಶಿರಸಿ ಯಲ್ಲಾಪುರ ನಾಕಾದ ಜರಾಕ್ಸ್ ಅಂಗಡಿ ಬಳಿ ದಿನೇಶ ಚಿಂಚ್ರೆಕರ್ ಅವರನ್ನು ಕರೆಯಿಸಿಕೊಂಡು `ಸಾಲ ತೀರಿಸುವುದಕ್ಕಾಗಿ’ ಎಂದು ನಂಬಿಸಿ ಕೆಲ ಪತ್ರಿಕೆಗಳ ಮೇಲೆ ಸಹಿಪಡೆದಿದ್ದರು.
ಅದಾದ ನಂತರ ಶಿರಸಿ ಉಪನೋಂದಣಿ ಕಚೇರಿಗೂ ಕರೆದೊಯ್ದು ಅಧಿಕಾರ ಪತ್ರಪಡೆದಿದ್ದರು. ಕಾನಸೂರು, ಮಂಚಿಕೇರಿ ಕೆಡಿಸಿಸಿ ಬ್ಯಾಂಕಿಗೆ ಕರೆದೊಯ್ದು ಅಲ್ಲಿ ಸಹ ಸಹಿ ಹಾಕಿಸಿಕೊಂಡಿದ್ದರು. ಅದಾದ ನಂತರ 2024ರಲ್ಲಿ ನಕಲಿ ದಾಖಲೆ ನೀಡಿ ಜಾಮೀನು ನೀಡಿದ ಬಗ್ಗೆ ದಿನೇಶ ಚಿಂಚ್ರೇಕರ್ ಅವರ ವಿರುದ್ಧ ಪ್ರಕರಣ ದಾಖಲಾಯಿತು. ವಿಚಾರಿಸಿದಾಗ ಈ ಹಿಂದೆ ತಾವು ಮೋಸ ಹೋಗಿ ವಿವಿಧ ಕಾಗದ ಪತ್ರಗಳಿಗೆ ಸಹಿ ಹಾಕಿದ್ದು ಗೊತ್ತಾಯಿತು. `ತಾನೂ ಸಾಲವನ್ನು ಪಡೆದಿಲ್ಲ. ಯಾರಿಗೂ ಜಾಮೀನು ಹಾಕಿಲ್ಲ’ ಎಂದು ದಿನೇಶ ಚಿಂಚ್ರೇಕರ್ ಹೇಳಿದರು. ಆದರೆ, ಕಾಗದ ಪತ್ರಗಳಲ್ಲಿ ಅವರದ್ಧೇ ಸಹಿಯಿದ್ದ ಕಾರಣ ಇದನ್ನು ಯಾರೂ ನಂಬಲಿಲ್ಲ.
ತನ್ನಿoದ ಉಪಾಯವಾಗಿ ಸಹಿಪಡೆದು ಬ್ಯಾಂಕಿಗೆ ಒದಗಿಸಿ ಸಾಲಪಡೆದಿರುವುದು ಹಾಗೂ ಜಾಮೀನು ಹಾಕಿಸಿರುವ ರವೀಶ ಹೆಗಡೆ ಕಿತಾಪತಿ ಬಗ್ಗೆ ಅರಿತು ದಿನೇಶ ಚಿಂಚ್ರೇಕರ್ ಪೊಲೀಸರ ಮೊರೆ ಹೋದರು. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ರವೀಶ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿದರು.