ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ ಸಾರ್ವಜನಿಕ ದೂರಿನ ಹಿನ್ನಲೆ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಅವರು ಗುರುವಾರ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಾಖಲೆಗಳ ಪ್ರಕಾರ ಈ ಆಸ್ಪತ್ರೆ 24 ಗಂಟೆಯೂ ಸೇವೆ ನೀಡುತ್ತಿದೆ. ಆದರೆ, ನಿತ್ಯ 8 ಗಂಟೆ ನಂತರ ಆಸ್ಪತ್ರೆ ಬಾಗಿಲು ಮುಚ್ಚಲಾಗುತ್ತಿದೆ. ಈ ಬಗ್ಗೆ ಅಲ್ಲಿನವರು ಲೋಕಾಯುಕ್ತರಿಗೆ ದೂರು ನೀಡಿದ್ದು, ಅದರ ತಪಾಸಣೆಗಾಗಿ ಡಿವೈಎಸ್ಪಿ ಧನ್ಯಾ ನಾಯಕ ಭೇಟಿ ನೀಡಿದರು. `ಆಸ್ಪತ್ರೆಯಲ್ಲಿ ಖಾಯಂ ವೈದ್ಯರು ಇಲ್ಲ. ಇದರಿಂದ ಸಮಸ್ಯೆ ಆಗಿದೆ’ ಎಂದು ಅಲ್ಲಿನ ರೋಗಿಗಳು ದೂರಿದರು.
ಲೋಕಾಯುಕ್ತ ತಂಡದವರು ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಔಷಧ ದಾಸ್ತಾನು ಕೊಠಡಿಗೆ ತೆರಳಿ ತಪಾಸಣೆ ನಡೆಸಿದರು. ಅವಧಿ ಮೀರಿದ ಔಷಧ ನೋಡಿ ಅವರು ಗರಂ ಆದರು. ರೋಗಿಗಳನ್ನು ಸಹ ಮಾತನಾಡಿಸಿ, ಅವರ ಅಹವಾಲು ಆಲಿಸಿದರು. ಆಂಬುಲೆನ್ಸ್ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ವೀಕ್ಷಿಸಿದರು.
ತುರ್ತು ಕೊಠಡಿ, ಔಷಧಗಳ ದಾಸ್ತಾನು, ಹಾಜರಾತಿ ಪುಸ್ತಕ ಪರಶೀಲನೆ ಮಾಡಿದರು. ಅಲ್ಲಿನ ಅವ್ಯವಸ್ಥೆ ಕಂಡು ಕಿಡಿಕಾರಿದರು. ತಪಾಸಣೆ ಕುರಿತು ಹಿರಿಯ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸುವುದಾಗಿ ಧನ್ಯ ನಾಯಕ ತಿಳಿಸಿದರು.