`ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹೊಸದಾಗಿ ಮನೆ ಸಂಖ್ಯೆ ನೀಡಲು ಅಧಿಕಾರಿಗಳು ಕಾಡಿಸುತ್ತಿದ್ದು, ಒಂದು ತಿಂಗಳ ಒಳಗೆ ಎಲ್ಲಾ ತಾಂತ್ರಿಕ ಸಮಸ್ಯೆ ಬಗೆಹರಿಸಿ ಅಗತ್ಯವಿದ್ದವರಿಗೆ ಮನೆ ಸಂಖ್ಯೆ ನೀಡಬೇಕು’ ಎಂದು ಶಿರಸಿಯ ಗ್ರಾಮ ಪಂಚಾಯತ ಸದಸ್ಯರು ಆಗ್ರಹಿಸಿದ್ದಾರೆ. ಒಂದು ತಿಂಗಳ ಗಡುವು ಮುಗಿದರೂ ಸಮಸ್ಯೆ ಹಾಗೇ ಉಳಿದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಶಿರಸಿಯಲ್ಲಿ ಶುಕ್ರವಾರ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಸಭೆ ನಡೆದಿದ್ದು, ಆಸ್ತಿ ಸಂಖ್ಯೆ ವಿಷಯವಾಗಿ ಸದಸ್ಯರು ಚರ್ಚಿಸಿದರು. ಜನ ಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಇದರಿಂದ ಗ್ರಾ ಪಂ ಸದಸ್ಯರಿಗೆ ಎದುರಾಗುತ್ತಿರುವ ಆತಂಕದ ಕುರಿತು ಅನೇಕರು ವಿಷಯ ಮಂಡಿಸಿದರು. ಬಡ ಜನರು ಮನೆ ಸಂಖ್ಯೆ ಇಲ್ಲದೇ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಭೆಯಲ್ಲಿದ್ದವರು ನೋವು ತೋಡಿಕೊಂಡರು.
`ಅನೇಕ ಗ್ರಾಮ ಪಂಚಾಯತಗಳಲ್ಲಿ ಮನೆ ಸಂಖ್ಯೆ ನೀಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಅನೇಕ ವರ್ಷಗಳಿಂದ ಜನ ಮನೆಯಲ್ಲಿ ವಾಸವಾಗಿದ್ದರೂ ಆ ಮನೆಗೆ ಅಧಿಕೃತ ಸಂಖ್ಯೆ ಸಿಗುತ್ತಿಲ್ಲ’ ಎಂದು ಗ್ರಾ ಪಂ ಸದಸ್ಯರು ಅಸಮಧಾನಹೊರಹಾಕಿದರು. ಈ ಸಮಸ್ಯೆ ಬಗ್ಗೆ ತಾಲೂಕು ಪಂಚಾಯತ ಅಧಿಕಾರಿಗಳ ಜೊತೆ ಚರ್ಚಿಸಿದ ಶಿರಸಿ ಒಕ್ಕೂಟ ಅಧ್ಯಕ್ಷ ನವೀನ ಶೆಟ್ಟಿ `ಒಂದು ತಿಂಗಳ ಒಳಗೆ ಸಮಸ್ಯೆ ಬಗೆಹರಿಸದೇ ಇದ್ದರೆ ಉಗ್ರ ಹೋರಾಟ ನಿಶ್ಚಿತ’ ಎಂದು ಎಚ್ಚರಿಸಿದರು.
ಒಕ್ಕೂಟದ ಸದಸ್ಯರಾದ ರವಿಶ್ ಹೆಗಡೆ, ನಾರಾಯಣ ಹೆಗಡೆ, ಮಂಜುನಾಥ ಪೂಜಾರಿ, ಗಜಾನನ ನಾಯ್ಕ, ಎಸ್ ಎಲ್ ರೆಬೆಲ್ಲೊ , ಶ್ರೀಕಲಾ ನಾಯ್ಕ, ನಾಗರಾಜ ಮುಕ್ರಿ ಅವರು ಇದಕ್ಕೆ ಧ್ವನಿಗೂಡಿಸಿದರು. `ಮನೆ ನಂ ನೀಡಲು ಈಗಲೂ ಅವಕಾಶವಿದೆ. ಈ ಬಗ್ಗೆ ಗ್ರಾ ಪಂ ಅಧಿಕಾರಿಗಳಿಗೆ ಸೂಚಿಸುವೆ’ ಎಂದು ತಾ ಪಂ ಅಧಿಕಾರಿಗಳು ಸಮಾಧಾನ ಮಾಡಿದರು.