ಕುಮಟಾದ ಹೊಲನಗದ್ದೆ ಗ್ರಾಮ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿ ನಾಲ್ಕು ತಿಂಗಳು ಕ್ರಮವಾಗದ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಲೋಕಾಯುಕ್ತ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರಿಗೆ ಶುಕ್ರವಾರ ಆಗ್ನೆಲ್ ರೋಡ್ರಿಗ್ರಸ್ ಅವರು ಅಂಚೆ ಮೂಲಕ ಪತ್ರ ರವಾನಿಸಿದರು. ಫೆ 17ರಂದು ಕಾರವಾರ ಲೋಕಾಯುಕ್ತರಿಗೆ ಅವರು ದೂರು ನೀಡಿದ್ದರು. ಹೊಲನಗದ್ದೆ ಗ್ರಾಮ ಪಂಚಾಯತದಲ್ಲಿ ಸಾಕಷ್ಟು ಅಕ್ರಮ-ಅವ್ಯವಹಾರ ನಡೆದ ಬಗ್ಗೆ ದೂರಿದ್ದರು. ಸಾರ್ವಜನಿಕರ ಕೆಲಸ ಮಾಡಿಕೊಡಲು ಅನಗತ್ಯ ತೊಂದರೆ ಮಾಡುತ್ತಿರುವ ಬಗ್ಗೆ ವಿವರಿಸಿದ್ದರು.
ಗ್ರಾಮ ಪಂಚಾಯತದ ದೂರವಾಣಿ ಹಾಳಾದ ಬಗ್ಗೆ ತಿಳಿಸಿದರೂ ರಿಪೇರಿ ಮಾಡಿಸದ ಬಗ್ಗೆ ಆಕ್ಷೇಪಿಸಿದ್ದರು. ಗ್ರಾ ಪಂ ವ್ಯಾಪ್ತಿಯಲ್ಲಿ ದನಕಳ್ಳತನ ಹೆಚ್ಚಿದ್ದು, ಸಿಸಿ ಕ್ಯಾಮರಾ ಅಳವಡಿಸುವಂತೆ ಮನವಿ ಮಾಡಿದರೂ ಕ್ರಮ ಆಗದ ಬಗ್ಗೆ ವಿವರಿಸಿದ್ದರು. ಅಪಾಯಕಾರಿ ಮರದ ಟೊಂಗೆ ಕಡಿಯುವಂತೆ ಒತ್ತಾಯಿಸಿದರೂ ಪಿಡಿಓ ಬೇಜವಬ್ದಾರಿಯಿಂದ ವರ್ತಿಸಿದ್ದನ್ನು ಅವರು ಲೋಕಾಯುಕ್ತರ ಗಮನಕ್ಕೆ ತಂದಿದ್ದರು.
ಹೆಚ್ಚುವರಿ ಕರ ವಸೂಲಿ, ಮಹಿಳೆಯರಿಗೆ ಅನ್ಯಾಯದ ಬಗ್ಗೆಯೂ ಪತ್ರ ಬರೆದಿದ್ದು, `ಯಾವ ಪತ್ರಕ್ಕೂ ಹಿಂಬರಹ ಬಂದಿಲ್ಲ’ ಎಂಬ ಕಾರಣಕ್ಕೆ ಅವರು ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದಾರೆ.