ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರ ಕಣ್ಮರೆ ಪ್ರಮಾಣ ಹೆಚ್ಚಾಗಿದೆ. ಈ ವಾರ ಮೂರು ಮಹಿಳೆಯರು ಕಾಣೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆದಿದೆ.
ಸಿದ್ದಾಪುರದ ಬಿರ್ಲಮಕ್ಕಿಯ ನೆಟ್ಟಗೋಡ ಗ್ರಾಮದ ಶೋಭಾ ಗೌಡ (35) ಕಾಣೆಯಾಗಿದ್ದಾರೆ. ಜೂನ್ 15ರಂದು ಉಪ್ಪಾಗೆ ಹುಳಿ ಆರಿಸಿಕೊಂಡು ಬರಲು ಕಾಡಿನ ಕಡೆ ಹೊರಟ ಅವರು ಮತ್ತೆ ಮನೆಗೆ ಮರಳಲಿಲ್ಲ. ಎಲ್ಲಿ ಹುಡುಕಿದರೂ ಅವರ ಸುಳಿವು ಸಿಕ್ಕಿಲ್ಲ. ಹೀಗಾಗಿ ಪತ್ನಿ ಹುಡುಕಾಟ ನಡೆಸಿದ ಹನುಮಂತ ಗೌಡ ಅವರು ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಸಿದ್ದಾಪುರ ಪೊಲೀಸರು ಸಹ ಶೋಭಾ ಗೌಡ ಅವರಿಗಾಗಿ ಶೋಧ ನಡೆಸಿದ್ದಾರೆ.
ಹಳಿಯಾಳದ ಜಾಂಬಾಲಗಲ್ಲಿಯಲ್ಲಿ ವಾಸವಾಗಿದ್ದ 24 ವರ್ಷದ ಮಿಸ್ಬಾ ಮತೀನ ಪಾಶಾ ಅವರು ಕಾಣೆಯಾಗಿದ್ದಾರೆ. ಜೂನ್ 17ರಂದು ಬಸ್ ನಿಲ್ದಾಣ ಬಳಿಯ ಪದ್ಮಾವತಿ ಹೊಟೇಲಿಗೆ ಕೆಲಸಕ್ಕೆ ಹೋಗಿದ್ದ ಅವರು ಅಲ್ಲಿಂದ ನಾಪತ್ತೆಯಾಗಿದ್ದಾರೆ. ಬಸ್ ನಿಲ್ದಾಣದ ಬಳಿ ಹೋಗಿ ಬರವುದಾಗಿ ಹೊಟೇಲ್ ಮಾಲಕರ ಬಳಿ ಹೇಳಿ ಹೊರಟ ಮಿಸ್ಟಾ ಮತೀನ ಪಾಶಾ ಅವರು ಮುಂದೆ ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಲಿಲ್ಲ. ಅವರು ಮನೆಗೆ ಸಹ ಮರಳಿಲ್ಲ. ಹೀಗಾಗಿ ಅವರ ಕುಟುಂಬದವರ ಜೊತೆ ಪೊಲೀಸರು ಶೋಧ ನಡೆಸಿದ್ದಾರೆ.
ಸಿದ್ದಾಪುರ ಮಾವಿನಗುಂಡಿಯ ನಿಖಿತಾ (28) ಎಂಬಾತರು ಸಹ ಏಕಾಏಕಿ ಕಾಣೆಯಾಗಿದ್ದಾರೆ. ಮೇ 22ರಂದು ಹೊನ್ನಾವರಕ್ಕೆ ಹೋಗುವುದಾಗಿ ಹೇಳಿದ್ದ ಅವರು ನಂತರ ಫೋನ್ ಸಂಪರ್ಕಕ್ಕೂ ಸಿಕ್ಕಿಲ್ಲ. ಅವರ ಪತಿ ಡಿಕ್ಷನ್ ಬಸ್ಯಾಂವ್ ಫರ್ನಾಡಿಂಸ್ ಪತ್ನಿಗಾಗಿ ಅವರ ತವರುಮನೆಗೆ ಹೋಗಿ ಬಂದರೂ ಸುಳಿವು ಸಿಕ್ಕಿಲ್ಲ. ಹೀಗಾಗಿ ಅವರು ಇದೀಗ ಪೊಲೀಸ್ ದೂರು ನೀಡಿದ್ದು, ನಿಖಿತಾ ಅವರಿಗಾಗಿ ಹುಡುಕಾಟ ನಡೆದಿದೆ.