ಸಿದ್ದಾಪುರದ ಮಂಜುನಾಥ ಮಡಿವಾಳ ಹಾಗೂ ಸಂದೇಶ ಮಡಿವಾಳ ನಡುವೆ ವೈಮನಸ್ಸಿದ್ದು, ಅದೇ ವಿಷಯವಾಗಿ ಅವರಿಬ್ಬರ ಪಾಲಕರು ಹೊಡೆದಾಟ ನಡೆಸಿದ್ದಾರೆ. ಪಾಲಕರ ಹೊಡೆದಾಟಕ್ಕೆ ಮಕ್ಕಳು ಕೈ ಜೋಡಿಸಿದ್ದು, ಈ ವೇಳೆ ಚಾಕು-ಕತ್ತಿ ಪ್ರವೇಶಿಸಿದ್ದರಿಂದ ಎಲ್ಲರೂ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಿದ್ದಾಪುರದ ಆಡುಕಟ್ಟಾದ ನೆಲ್ಲಿಕೊಪ್ಪದಲ್ಲಿ ರಮೇಶ ಮಡಿವಾಳ ಅವರು ತಮ್ಮ ಪುತ್ರ ಸಂದೇಶ ಮಡಿವಾಳ ಜೊತೆ ಕೃಷಿ ಕೆಲಸ ಮಾಡಿಕೊಂಡಿದ್ದರು. ಪಕ್ಕದ ಊರಾದ ಹೆಗ್ಗೆಕೊಪ್ಪದಲ್ಲಿ ಬಂಗಾರ್ಯ ಮಡಿವಾಳ ಅವರು ತಮ್ಮ ಪುತ್ರ ಮಂಜುನಾಥ ಮಡಿವಾಳ ಜೊತೆ ವಾಸವಾಗಿದ್ದರು. ಬಿಸಿ ರಕ್ತದ ಸಂದೇಶ ಮಡಿವಾಳ ಹಾಗೂ ಮಂಜುನಾಥ ಮಡಿವಾಳ ನಡುವೆ ಮೊದಲಿನಿಂದಲೂ ಕಾದಾಟ ನಡೆಯುತ್ತಿತ್ತು. ಈ ಹಿಂದೆ ನಡೆದಿದ್ದ ಜಗಳದ ಕಾರಣ ಅವರಿಬ್ಬರು ಪರಸ್ಪರ ದ್ವೇಷದಿಂದಲೇ ಬದುಕುತ್ತಿದ್ದರು.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸಹ ಪರಸ್ಪರ ದೂರು-ಪ್ರತಿ ದೂರುಗಳಿದ್ದವು. ಪೊಲೀಸರು ಎರಡು ಕಡೆಯವರನ್ನು ವಿಚಾರಣೆಗೊಳಪಡಿಸಿ ಬುದ್ದಿಹೇಳಿ ಕಳುಹಿಸಿದ್ದರು. ಅದಾಗಿಯೂ ಅವರ ನಡುವಿನ ದ್ವೇಷ ಮಾತ್ರ ಕಡಿಮೆ ಆಗಿರಲಿಲ್ಲ. ಜೂನ್ 19ರ ಮಧ್ಯಾಹ್ನ ಮಂಜುನಾಥ ಮಡಿವಾಳ ಅವರು ಸಂದೇಶ ಮಡಿವಾಳ ಅವರ ಮನೆ ಕಡೆ ಬಂದಿದ್ದರು. ಸಂದೇಶ ಮಡಿವಾಳ ಅವರ ಮನೆಯೊಳಗಿದ್ದ ಟಿವಿಯನ್ನು ಒಡೆದು, ಅಲ್ಲಿದ್ದ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಂದೇಶ ಮಡಿವಾಳ ಸಹ ಮಂಜುನಾಥ ಮಡಿವಾಳ ಅವರ ಮನೆಗೆ ನುಗ್ಗಿ ಅಲ್ಲಿದ್ದ ಗೇಟು-ಬಾಗಿಲು ಮುರಿದಿದ್ದರು.
ಆ ದಿನ ರಾತ್ರಿ ಮನೆಗೆ ಬಂದ ರಮೇಶ ಮಡಿವಾಳ ಮಗನಿಂದ ಘಟನಾವಳಿಗಳ ಮಾಹಿತಿ ಪಡೆದರು. ಈ ಬಗ್ಗೆ ವಿಚಾರಿಸುವುದಕ್ಕಾಗಿ ಹೆಗ್ಗೆಕೊಪ್ಪದಲ್ಲಿ ಬಂಗಾರ್ಯ ಮಡಿವಾಳ ಅವರ ಮನೆಗೆ ಹೋದರು. ಆಗ, ರಮೇಶ ಮಡಿವಾಳ ಹಾಗೂ ಬಂಗಾರ್ಯ ಮಡಿವಾಳರ ನಡುವೆ ಜಗಳ ನಡೆಯಿತು. ಅವರಿಬ್ಬರ ಮಕ್ಕಳು ದೊಡ್ಡದಾಗಿ ಜಗಳ ಶುರು ಮಾಡಿದರು. ಆ ನಾಲ್ವರು ಸೇರಿ ಪರಸ್ಪರ ಹೊಡೆದಾಟ ನಡೆಸಿದರು.
ಈ ವೇಳೆ ಮಂಜುನಾಥ ಮಡಿವಾಳ ಮನೆಯಲ್ಲಿದ್ದ ಕತ್ತಿ ತಂದು ಬೀಸಿದರು. ರಮೇಶ ಮಡಿವಾಳ ಅವರ ಕೈಗೆ ಗಾಯಗೊಳಿಸಿದರು. ರಮೇಶ ಮಡಿವಾಳ ಸಹ ಕೈಯಿಂದ ಥಳಿಸಿದರು. ಬಂಗಾರ್ಯ ಮಡಿವಾಳ ಅವರು ಸಂದೇಶ ಮಡಿವಾಳ ಅವರಿಗೆ ಥಳಿಸಿದರು. ಸಂದೇಶ ಮಡಿವಾಳ ಸಹ ಎದುರಾಳಿಗಳ ಜೊತೆ ಹೊಡೆದಾಟ ಮಾಡಿದರು. ಪರಿಣಾಮ ಎಲ್ಲರೂ ಗಾಯಗೊಂಡು ಆಸ್ಪತ್ರೆ ಸೇರಿದರು.
ಎರಡು ಕಡೆಯವರ ದೂರು ಆಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದರು.