ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ನಡೆದು ಒಂದು ವರ್ಷವಾದರೂ ನದಿ ಆಳದಲ್ಲಿ ಬಿದ್ದ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆ ನಡೆದಿಲ್ಲ. ಗುಡ್ಡ ಕುಸಿತದ ಅವಧಿಯಲ್ಲಿ ನಾಪತ್ತೆಯಾದ ಇಬ್ಬರ ಸುಳಿವು ಸಹ ಈವರೆಗೆ ಸಿಕ್ಕಿಲ್ಲ.
2024ರ ಜುಲೈ 16ರಂದು ಶಿರೂರಿನಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿಯಿತು. ಹೆದ್ದಾರಿ ಅಂಚಿನಲ್ಲಿ ಅಂಗಡಿ ಮಾಡಿಕೊಂಡಿದ್ದ ಲಕ್ಷಣ ನಾಯ್ಕ ಕುಟುಂಬ ಗುಡ್ಡದ ಅಡಿ ಮಣ್ಣಾಯಿತು. ಇದರೊಂದಿಗೆ ಕೇರಳದ ಲಾರಿ ಚಾಲಕ ಅರ್ಜುನ ನದಿ ಆಳದಲ್ಲಿ ಸಿಕ್ಕಿಬಿದ್ದಿದ್ದರಿಂದ ಈ ಭೂ ಕುಸಿತ ಅಂತರಾಷ್ಟಿಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಇಲ್ಲಿನ ಕಾರ್ಯಾಚರಣೆಯನ್ನು ದೇಶ-ವಿದೇಶದವರು ಅಣಕಿಸುವಂತಾಯಿತು. ಒಟ್ಟು 11 ಜನ ಗುಡ್ಡ ಕುಸಿತದಿಂದ ಸಾವನಪ್ಪಿರುವ ಲೆಕ್ಕ ಸಿಕ್ಕಿತು. ಅರ್ಜುನನ ಶವ ಸಿಕ್ಕ ನಂತರ ಶಿರೂರು ಗುಡ್ಡದ ಸುದ್ದಿ ಕ್ರಮೇಣವಾಗಿ ಕಡಿಮೆಯಾಯಿತು.
ಅದಾದ ನಂತರ ಗಂಗಾವಳಿ ಆಳದಲ್ಲಿ ತುಂಬಿದ ಗುಡ್ಡದ ಮಣ್ಣನ್ನು ತೆಗೆಯಲು ನಾನಾ ಬಗೆಯ ಕಸರತ್ತು ನಡೆಯಿತು. ಗೋವಾದ ಕಂಪನಿಯೊAದು ಇದಕ್ಕೆ ಆಸಕ್ತಿವಹಿಸಿದ್ದು, ನಂತರ ಮಳೆ ಕಾರಣ ಒಡ್ಡಿ ಮಣ್ಣು ತೆಗೆಯುವ ಕೆಲಸವನ್ನು ಅರ್ದಕ್ಕೆ ನಿಲ್ಲಿಸಿತು. ಅದಾದ ನಂತರ ಬೇಸಿಗೆ ಬಂದರೂ ಗುಡ್ಡದ ಮಣ್ಣು ತೆರವು ಮಾಡುವ ಪ್ರಕ್ರಿಯೆ ಮುಂದುವರೆಯಲಿಲ್ಲ. ಗುಡ್ಡ ಕುಸಿತದ ಅವಧಿಯಲ್ಲಿ ಹೆದ್ದಾರಿಯಲ್ಲಿ ಬಿದ್ದ ಭಾರೀ ಪ್ರಮಾಣದ ಮಣ್ಣನ್ನು ತುರ್ತಾಗಿ ತೆಗೆದು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ನದಿ ನೀರಿನಲ್ಲಿನ ಮಣ್ಣು ತೆಗೆಯುವ ಸಾಹಸಕ್ಕೆ ಯಾರೂ ಮುಂದೆ ಬರಲಿಲ್ಲ.
ನದಿ ಆಳದಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಬಿದ್ದಿದ್ದರಿಂದ ಗಂಗಾವಳಿ ಹರಿವಿಗೆ ಸೂಕ್ತ ಜಾಗವಿಲ್ಲ. ಪರಿಣಾಮ ಭಾರೀ ಪ್ರಮಾಣದಲ್ಲಿ ಮಳೆಯಾದರೆ ನದಿ ನೀರು ಮತ್ತೆ ಹೆದ್ದಾರಿಗೆ ಬರುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಪಕ್ಕದ ಉಳುವರೆ ಊರಿಗೂ ಕಂಟಕ ತಪ್ಪಿದ್ದಲ್ಲ. ಹೀಗಾಗಿ ನದಿ ಆಳದ ಮಣ್ಣು ಹೊರ ಹಾಕಲು ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡಿದರೂ ಮಣ್ಣು ತೆಗೆಯುವ ಟೆಂಡರ್ ಪಡೆಯಲು ಯಾವ ಕಂಪನಿಯೂ ಆಸಕ್ತಿವಹಿಸಿಲ್ಲ. ದೊಡ್ಡ ದೊಡ್ಡ ಬಾರ್ಜುಗಳ ಬಳಕೆ, ಅಧಿಕ ಕಾಮಗಾರಿ ವೆಚ್ಚ, ಮುಂದುವರೆದ ಮಳೆ ಹಾಗೂ ಮಣ್ಣು ತೆಗೆಯುವ ಕೆಲಸದಲ್ಲಿನ ನಿರಾಸಕ್ತಿಯಿಂದ ಗಂಗಾವಳಿ ಆಳದಲ್ಲಿರುವ ಗುಡ್ಡದ ಮಣ್ಣು ಹಾಗೇ ಉಳಿದಿದೆ.