2022ರಲ್ಲಿ `ಭಾರತ ಎಲೆಕ್ಟಾನಿಕ್’ ಕಂಪನಿ ತಮ್ಮ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಕುಮಟಾಗೆ ಟ್ರಾಮಾ ಕೇರ್ ಸೆಂಟರ್ ಜೊತೆ ವೈದ್ಯಕೀಯ ಸಿಬ್ಬಂದಿ ನೇಮಿಸಿದರೂ ಆ ಸಿಬ್ಬಂದಿ ನೇಮಕಾತಿ ಈವರೆಗೂ ನಡೆದಿರಲ್ಲ. ಕಾರಣ ಖಾಸಗಿ ಕಂಪನಿ ದುಡ್ಡು ಕೊಟ್ಟರೂ ಅದನ್ನು ಖರ್ಚು ಮಾಡಲು ಈ ಸರ್ಕಾರಕ್ಕೆ ಮನಸ್ಸಿಲ್ಲ!
ಕರಾವಳಿ ಭಾಗದಲ್ಲಿ ಸಾಕಷ್ಟು ಅಪಘಾತ ನಡೆಯುತ್ತಿರುವ ಬಗ್ಗೆ ಅರಿತ ಕುಮಟಾ ಶಾಸಕ ದಿನಕರ ಶೆಟ್ಟಿ ಅವರು `ಭಾರತ ಎಲೆಕ್ಟಾನಿಕ್’ ಕಂಪನಿಯ ಬೆನ್ನು ಬಿದ್ದರು. ಆ ಕಂಪನಿ ಅಧಿಕಾರಿಗಳ ಜೊತೆ ಮಾತನಾಡಿ ಜಿಲ್ಲೆಯ ಮದ್ಯವರ್ತಿ ಸ್ಥಳವಾದ ಕುಮಟಾಗೆ ಟ್ರಾಮಾ ಕೇರ್ ಸೆಂಟರ್ ತರುವ ಪ್ರಯತ್ನ ಮಾಡಿದರು. ಇದರ ಫಲವಾಗಿ ಕಂಪನಿಯವರು 2.74 ಕೋಟಿ ರೂ ಸರ್ಕಾರಕ್ಕೆ ನೀಡಿದರು. ಆದರೆ, ಆ ಹಣ ಕುಮಟಾಗೆ ಬಂದು ತಲುಪಲಿಲ್ಲ. ಮೂರು ವರ್ಷ ಕಳೆದರೂ ಆ ಯೋಜನೆ ಮಂಜೂರಿಯೇ ಆಗಲಿಲ್ಲ.
ಅದಾಗಿಯೂ ದಿನಕರ ಶೆಟ್ಟಿ ಅವರು ಪಟ್ಟು ಬಿಡಲಿಲ್ಲ. ಸರ್ಕಾರದ ವಿರುದ್ಧ ಹೋರಾಟ ನಡೆಸಿದ ಅವರು ನಾಲ್ಕು ಸಿಬ್ಬಂದಿಯನ್ನು ಆಸ್ಪತ್ರೆಗೆ ತಂದರು. ಆದರೆ, ಅಲ್ಲಿಯೂ ವಿಘ್ನವೊಂದು ಎದುರಾಗಿದ್ದು ಈ ಬಾರಿ ಗುತ್ತಿಗೆದಾರರು ಕೈ ಕೊಟ್ಟರು. ಹೀಗಾಗಿ ಹಳೆಯ ಗುತ್ತಿಗೆದಾರರನ್ನು ಬದಲಿಸಿ ಬೇರೆ ಗುತ್ತಿಗೆದಾರರಿಗೆ ಇದೀಗ ಜವಾಬ್ದಾರಿವಹಿಸಲಾಗಿದೆ. ಟ್ರಾಮಾ ಕೇರ್ ಸೆಂಟರ್ ನಿರ್ಮಾಣದಲ್ಲಿ ಅಲ್ಪ-ಸ್ವಲ್ಪ ಕೆಲಸ ಬಾಕಿಯಿದ್ದು, ಶೀಘ್ರದಲ್ಲಿಯೇ ಅದೆಲ್ಲವೂ ಪೂರ್ಣವಾಗುವ ಸಾಧ್ಯತೆಗಳಿದೆ. ಸದ್ಯ ಟ್ರಾಮಾ ಕೇರ್ ಸೆಂಟರ್’ಗೆ ಗುತ್ತಿಗೆ ಆಧಾರವಾಗಿ ಕೆಲಸ ನಿರ್ವಹಿಸಲು ಕೀಲು ಮತ್ತು ಮೂಲೆ ತಜ್ಞ, ಅರವಳಿಕೆ ತಜ್ಞ, ಶುಶ್ರೂಷಕ, ಲ್ಯಾಬ್ ಟೆಕ್ನಿಷಿಯನ್ ಹುದ್ದೆಯ ಮಂಜೂರಾತಿ ಸಿಕ್ಕಿದೆ. ಇನ್ನೂ ಮೂರು ತಿಂಗಳಿನಲ್ಲಿ ಟ್ರಾಮಾ ಕೇರ್ ಸೆಂಟರ್ ಜನ ಸೇವೆಗೆ ಸಿಗಲಿದೆ ಎಂದು ದಿನಕರ ಶೆಟ್ಟಿ ವಿಶ್ವಾಸವ್ಯಕ್ತಪಡಿಸಿದರು.
`ಬಿಜೆಪಿ ಸರ್ಕಾರವಿದ್ದಾಗ ಕುಮಟಾದಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ಜಾಗ ಗುರುತಿಸಲಾಗಿತ್ತು. ಈಗಿನ ಸರ್ಕಾರಕ್ಕೆ ಆಸ್ಪತ್ರೆ ನಿರ್ಮಿಸಲು ಆಸಕ್ತಿ ಇಲ್ಲ’ ಎಂದು ದಿನಕರ ಶೆಟ್ಟಿ ಸುದ್ದಿಗಾರರ ಮುಂದೆ ದೂರಿದರು. `ಅದಾಗಿಯೂ ಟ್ರಾಮಾ ಕೇರ್ ಸೆಂಟರ್ ಹಾಗೂ ಸಿಬ್ಬಂದಿ ಒದಗಿಸಿದಕ್ಕೆ ಆರೋಗ್ಯ ಸಚಿವರ ಜೊತೆ ಉಸ್ತುವಾರಿ ಸಚಿವರನ್ನು ಅಭಿನಂದಿಸುವೆ’ ಎಂದರು. ವೈದ್ಯರ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ಅವರು `ಕುಮಟಾದಲ್ಲಿಯೂ ಇಬ್ಬರು ವೈದ್ಯರ ವರ್ಗಾವಣೆ ಪ್ರಯತ್ನ ನಡೆದಿದೆ. ಅವರನ್ನು ಇಲ್ಲಿಯೇ ಉಳಿಸಿಕೊಳ್ಳಲು ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೈದ್ಯಕೀಯ ಸ್ಥಿತಿ ಬಗ್ಗೆ ಮನವರಿಕೆ ಮಾಡಲಿದ್ದೇವೆ’ ಎಂದರು.