ವಸತಿ ಮತ್ತು ಜೀವನೋಪಾಯ ಉದ್ದೇಶಕ್ಕೆ ರಾಜ್ಯದ ಅನೇಕ ಕಡೆ ಹಿಂದುಳಿದ ಸಮುದಾಯದ ಜನ ಅರಣ್ಯ ಭೂಮಿ ಅತಿಕ್ರಮಿಸಿಕೊಂಡಿದ್ದು, ಅವರಿಗೆ ಹಕ್ಕು ನೀಡುವ ವಿಷಯದಲ್ಲಿ ಹಿನ್ನಡೆಯಾಗಿದೆ. 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ತಂದ ಕಾಯ್ದೆಯಲ್ಲಿನ ತಪ್ಪು ಗ್ರಹಿಕೆಯಿಂದ ಅನುಷ್ಠಾನಕ್ಕೆ ಸಮಸ್ಯೆಯಾದ ಬಗ್ಗೆ ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯ ಮಾಹಿತಿ ನೀಡಿದೆ.
ಈ ಹಿನ್ನಲೆ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾ0ತ ಕೊಚರೇಕರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಅದರಲ್ಲಿ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾರೆ. `ಲಕ್ಷಾಂತರ ಜನ ಅನಧಿಕಾಲದಿಂದಲೂ ಅರಣ್ಯ ಭೂಮಿ ಅತಿಕ್ರಮಿಸಿಕೊಂಡು ಬದುಕುತ್ತಿದ್ದಾರೆ. ಅವರೆಲ್ಲರೂ ಭೂಮಿಯ ಹಕ್ಕಿನಿಂದ ಈಗಲೂ ವಂಚಿತರಾಗಿರುವದು ಖೇದಕರ’ ಎಂದು ಚಂದ್ರಕಾ0ತ ಕೋಚ್ರೇಕರ್ ಅವರು ಹೇಳಿದ್ದಾರೆ. `ಅರಣ್ಯ ಹಕ್ಕುಕಾಯ್ದೆಯಲ್ಲಿ ಹೇಳಲಾದ ಮೂರು ತಲೆಮಾರು ಪೂರ್ವದ ಅವಲಂಬನೆಯ ಅಂಶದ ಕುರಿತು ಅನುಷ್ಠಾನ ಅಧಿಕಾರಿಗಳಲ್ಲಿಯೇ ಗೊಂದಲವಿದೆ. ಈ ಗೊಂದಲ ಬಗೆಹರಿಸಿ ನ್ಯಾಯಾಲಯಗಳ ನಿರ್ದೆಶನ ಮತ್ತು 2012ರ ಅರಣ್ಯ ಹಕ್ಕುನಿಯಮಗಳಲ್ಲಿ ಇರುವ ಅವಕಾಶವನ್ನು ಪರಿಗಣಿಸಿ 2005ರಪೂರ್ವದ ಅರಣ್ಯ ಭೂಮಿಯಲ್ಲಿನ ಬಗರ ಹುಕುಂ ಸಾಗುವಳಿಯನ್ನು ಸಕ್ರಮ ಮಾಡಬೇಕು’ ಎಂದವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
`ಅರಣ್ಯ ಭೂಮಿ ಸಾಗುವಳಿದಾರರ ಪರ ನ್ಯಾಯಾಲಯದಿಂದಲೂ ಅನೇಕ ಆದೇಶಗಳು ಬಂದಿವೆ. ನೈಸರ್ಗಿಕ ನ್ಯಾಯ ನಿಯಮ ಅನ್ವಯ ಅರ್ಜಿ ಮರುಪರಿಶೀಲನೆಗೆ ನಿರ್ದೇಶನವಾಗಿದೆ. ನಮ್ಮ ಸಂಘಟನೆ ಸಹ ಸಾಕಷ್ಟು ಬಾರಿ ಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ವಿವರಿಸಿದೆ. ಅದಾಗಿಯೂ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಪ್ರಕ್ರಿಯಲ್ಲಿ ಅನಗತ್ಯ ಗೊಂದಲ ಮುಂದುವರೆದಿದ್ದು, ಅದೆಲ್ಲವನ್ನು ಬಗೆಹರಿಸಬೇಕು’ ಎಂದವರು ಬರೆದಿದ್ದಾರೆ. `ಗೊಂದಲ ಬಗೆಹರಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೇಂದ್ರಕ್ಕೆ ಪತ್ರ ಹೋಗಿದೆ. ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಹಲವು ಅರಣ್ಯ ಹಕ್ಕು ಅನುಷ್ಠಾನಾಧಿಕಾರಿಗಳು ವಿಭಿನ್ನ ನಿಲುವು ಹೊಂದಿರುವುದು ಕಾಯ್ದೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ’ ಎಂದು ಚಂದ್ರಕಾoತ ಕೋಚ್ರೇಕರ್ ಅವರು ಪತ್ರದಲ್ಲಿ ಹೇಳಿದ್ದಾರೆ.
`ರಾಜ್ಯದ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಮಲೆನಾಡು-ಕರಾವಳಿ ಭಾಗದ ಸಂಸದ, ಶಾಸಕರು ಮದ್ಯಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಬೇಕು. 2005ರ ಪೂರ್ವದಿಂದ ಅರಣ್ಯ ಭೂಮಿಯನ್ನು ಅವಲಂಬಿಸಿರುವ ರಾಜ್ಯದ ಜನರು ಭೂಮಿಯ ಹಕ್ಕಿನಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು’ ಎಂದು ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ.