ಮನೆ ಬಳಿ ಬರುವ ವನ್ಯಜೀವಿ ಉಪಟಳ ಸಹಿಸದೇ ಬೇಲಿ ನಿರ್ಮಾಣಕ್ಕೆ ಪ್ರಯತ್ನಿಸಿದ ಮನುಷ್ಯನ ಕಾರ್ಯಕ್ಕೆ ಕರಡಿ ಅಡ್ಡಪಡಿಸಿದೆ. ಜೊಯಿಡಾದಲ್ಲಿ ಬೇಲಿ ನಿರ್ಮಿಸುತ್ತಿದ್ದ ತುಕಾರಾಮ ದೇಸಾಯಿ ಅವರ ಮೇಲೆ ಕರಡಿ ದಾಳಿ ನಡೆಸಿದೆ.
ಜೊಯಿಡಾದ ಹುಡಸಾ ಗ್ರಾಮದದಲ್ಲಿ ತುಕಾರಾಮ ದೇಸಾಯಿ (45) ಅವರು ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡಿದ್ದ ಅವರು ಕಾಡುಪ್ರಾಣಿಗಳ ಉಪಟಳದಿಂದ ಬೇಸತ್ತಿದ್ದರು. ಮನೆ ಅಂಗಳದವರೆಗೂ ಕಾಡು ಪ್ರಾಣಿಗಳು ಬರುತ್ತಿದ್ದು, ಇದರ ತಡೆಗೆ ಅವರು ಮನೆ ಸುತ್ತ ಬೇಲಿ ನಿರ್ಮಿಸಲು ಉದ್ದೇಶಿಸಿದ್ದರು.
ಅದರಂತೆ, ಶನಿವಾರ ಮಧ್ಯಾಹ್ನ ಮನೆ ಹಿಂದೆ ಬೇಲಿ ನಿರ್ಮಿಸುತ್ತಿದ್ದರು. ಅರಣ್ಯ ಹಾಗೂ ತಮ್ಮ ಮನೆ ಗಡಿಭಾಗದಲ್ಲಿ ತಂತಿ ಎಳೆಯುತ್ತಿದ್ದ ತುಕಾರಾಮ ದೇಸಾಯಿ ಅವರ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿತು. ಪರಿಣಾಮ ತುಕಾರಾಮ ದೇಸಾಯಿ ಅವರು ನೆಲಕ್ಕೆ ಬಿದ್ದಿದ್ದು, ಅವರ ತಲೆ, ಮುಖ, ಕೈ-ಕಾಲುಗಳನ್ನು ಕರಡಿ ಪರಚಿತು.
ಜೋರಾಗಿ ಬೊಬ್ಬೆ ಹೊಡೆದ ಕಾರಣ ತುಕಾರಾಮ ದೇಸಾಯಿ ಅವರು ಜೀವ ಉಳಿಸಿಕೊಂಡರು. ಬೊಬ್ಬೆ ಸದ್ದಿಗೆ ಬೆದರಿದ ಕರಡಿ ಕಾಡಿನ ಕಡೆ ಹೋಗಿದ್ದು, ಅದಾದ ನಂತರ ಸ್ಥಳೀಯರು ತುಕಾರಾಮ ದೇಸಾಯಿ ಅವರನ್ನು ಉಪಚರಿಸಿದರು. ಮೊದಲು ಜೊಯಿಡಾ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ, ಇದೀಗ ಅವರನ್ನು ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.