ಸರ್ಕಾರಿ ಯೋಜನೆಯೊಂದರ ಗುತ್ತಿಗೆಪಡೆದ ಬೆಂಗಳೂರಿನ ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಸ್ಥಳೀಯ ನೌಕರರಿಗೆ ಸಂಬಳ ಕೊಡದೇ ದುಡಿಸಿಕೊಂಡಿದ್ದು, ಅಲ್ಲಿ ದುಡಿದವರಿಬ್ಬರು ಇದೀಗ ಕಾನೂನು ಹೋರಾಟ ಶುರು ಮಾಡಿದ್ದಾರೆ.
ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಮುಂಡಗೋಡದಲ್ಲಿ ಕೋಟಿ ಲೆಕ್ಕಾಚಾರದಲ್ಲಿ ಕೆಲಸ ಮಾಡಿದೆ. ಏತ ನೀರಾವರಿ ಯೋಜನೆಯ ಗುತ್ತಿಗೆಪಡೆದ ಈ ಕಂಪನಿ ಲಮಾಣಿ ತಾಂಡಾ ಮಹೇಶ ಲಮಾಣಿ ಹಾಗೂ ಅಲ್ತಾಪ ನಂದಿಗಟ್ಟಿ ಅವರನ್ನು ಕಾಸು ಕೊಡದೇ ದುಡಿಸಿಕೊಂಡಿದೆ. ಐದು ತಿಂಗಳ ವೇತನ ನೀಡದೇ ಸತಾಯಿಸಿದ ಕಂಪನಿ ಮುಖ್ಯಸ್ಥರ ವಿರುದ್ಧ ಮಹೇಶ ಲಮಾಣಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಮುಂಡಗೋಡದ ಕಲಗೇರಿಯಲ್ಲಿ ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಟ್ಯಾಂಕ್ ಪಿಲ್ಲಿಂಗ್ ಸ್ಕೀಮ್ ಯೋಜನೆ ಅನುಷ್ಠಾನ ಮಾಡಿದೆ. ಈ ಯೋಜನೆಯ ಸೈಟ್ ಸೂಪರ್ ವೈಸರ್ ಆಗಿ ಮಹೇಶ ಲಮಾಣಿ ದುಡಿದಿದ್ದು, ಅವರಿಗೆ ಕಂಪನಿ ನೇಮಕಾತಿ ಆದೇಶ ನೀಡಿತ್ತು. ಅದರ ಪ್ರಕಾರ ಅವರಿಗೆ ಪ್ರತಿ ತಿಂಗಳು 17 ಸಾವಿರ ರೂ ಸಂಬಳ ಬರಬೇಕಿತ್ತು. ಸೈಟ್ ಇಂಜಿನಿಯರ್ ಆಗಿದ್ದ ಅಲ್ತಾಪ ನಂದಿಗಟ್ಟಿ ಅವರಿಗೆ ಮಾಸಿಕ 25 ಸಾವಿರ ರೂ ಕಂಪನಿ ಪಾವತಿಸಬೇಕಿತ್ತು.
ಆದರೆ, 2024ರ ಸೆಪ್ಟೆಂಬರಿನಿoದ 2025ರ ಜನವರಿ ಅಂತ್ಯದವರೆಗೂ ಕಂಪನಿಯ ಅಮರನಾಥ ಸಾಂಗ್ವೆ ಹಾಗೂ ಶಿವಕುಮಾರ್ ಸಾಂಗ್ವೆ ಎಂಬಾತರು ಮಹೇಶ ಲಮಾಣಿ ಮತ್ತು ಅಲ್ತಾಪ ನಂದಿಗಟ್ಟಿ ಅವರನ್ನು ಪುಕ್ಕಟ್ಟೆಯಾಗಿ ದುಡಿಸಿಕೊಂಡರು. `ಸಂಬಳ ಕೊಡುತ್ತೇವೆ’ ಎಂದು ಸಮಾಧಾನ ಮಾಡಿ ಕಾಲ ಕಳೆದರು. ಕೊನೆಗೆ ಕಂಪನಿಯ ಸಾಮಗ್ರಿಗಳೆಲ್ಲವನ್ನು ಅವರು ಹೊತ್ತೊಯ್ದಿದ್ದು, ಸಂಬಳ ಕೊಡದೇ ಸತಾಯಿಸಲು ಶುರು ಮಾಡಿದರು.
ಒಟ್ಟು 2.10 ಲಕ್ಷ ರೂ ದುಡುಮೆಯ ಹಣ ಸಿಗದ ಕಾರಣ ಆ ಇಬ್ಬರು ಸಮಸ್ಯೆ ಅನುಭವಿಸಿದರು. ಕೊನೆಗೆ ತಮ್ಮನ್ನು ವಂಚಿಸಿದ ಅಮರನಾಥ ಸಾಂಗ್ವೆ ಹಾಗೂ ಶಿವಕುಮಾರ್ ಸಾಂಗ್ವೆ ವಿರುದ್ಧ ಮಹೇಶ ಲಮಾಣಿ ಅವರು ಮುಂಡಗೋಡು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.