ಕಾರವಾರದ ಸೀಬರ್ಡ್ ನೌಕಾನೆಲೆ ಯೋಜನೆಯಡಿ ಭೂಮಿ ಕಳೆದುಕೊಂಡಿದ್ದ 57 ಭೂ ಮಾಲೀಕರಿಗೆ 10 ಕೋಟಿ ರೂ ಹೆಚ್ಚುವರಿ ಪರಿಹಾರ ದೊರೆತಿದೆ. ಶನಿವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಸತೀಶ್ ಸೈಲ್ ಈ ಪರಿಹಾರದ ಹಣ ವಿತರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮೂಲಕ ಸಂತ್ರಸ್ತರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಈ ಹಣ ವರ್ಗಾವಣೆ ನಡೆಯಿತು. `ಇನ್ನೂ 60 ಕೋಟಿ ರೂ ಪರಿಹಾರದ ಮೊತ್ತ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದು, ಆ ಬಗ್ಗೆಯೂ ಪ್ರಯತ್ನಿಸಲಾಗುವುದು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಚಿವ ಮಂಕಾಳು ವೈದ್ಯ ಈ ವೇಳೆ ಭರವಸೆ ನೀಡಿದರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಆರ್ ವಿ ದೇಶಪಾಂಡೆ ಅವರು ಆನ್‌ಲೈನ್ ಮೂಲಕ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದು, `ಎಲ್ಲರೂ ಹಣವನ್ನು ಸರಿಯಾಗಿ ಬಳಸಿಕೊಳ್ಳಿ’ ಎಂದು ಸಲಹೆ ನೀಡಿದರು.
`ಜಿಲ್ಲೆಯ ಜನರ ತ್ಯಾಗದಿಂದ ಸೀಬರ್ಡ್ ಯೋಜನೆ ಬಂದಿದೆ. ಸಂತ್ರಸ್ಥರ ಹೆಚ್ಚುವರಿ ಪರಿಹಾರ ಮೊತ್ತ ಬಿಡುಗಡೆ ಕುರಿತಂತೆ ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚಿಸಿ, ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸಿದ ನಂತರ ಈ ಕೆಲಸಕ್ಕೆ ವೇಗ ದೊರೆತಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. `ಬಾಕಿಯಿರುವ ಪರಿಹಾರ ಮಂಜೂರಿ ಮಾಡಿಸುವ ಕೆಲಸ ತಮ್ಮ ಜವಾಬ್ದಾರಿ’ ಎಂದು ಸಂಸದರು ಘೋಷಿಸಿದರು.
ಶಾಸಕ ಸತೀಶ್ ಸೈಲ್ ಮಾತನಾಡಿ `ಸೀಬರ್ಡ್ ಪರಿಹಾರದ ಮೊತ್ತ ಪಾವತಿ ಪ್ರಕರಣದಲ್ಲಿ ವಿಳಂಬದ ಕಾರಣ ಹಲವು ಮಂದಿಗೆ ಪರಿಹಾರ ದೊರೆತಿಲ್ಲ. ಅವರಿಗೂ ಪರಿಹಾರದ ಮೊತ್ತ ದೊರೆಯುವ ರೀತಿಯಲ್ಲಿ ಕ್ರಮವಾಗಬೇಕು’ ಎಂದರು. ಇದೇ ಸಂದರ್ಭದಲ್ಲಿ ಪ್ರವಾಸೋದÀ್ಯಮ ಇಲಾಖೆಯಿಂದ ಜಿಲ್ಲೆಯ ಕಡಲ ತೀರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೀವರಕ್ಷಕರಿಗೆ 17.55 ಲಕ್ಷ ರೂ ಮೊತ್ತದ ಜೀವ ರಕ್ಷಕ ಉಪಕರಣಗಳನ್ನು ವಿತರಿಸಲಾಯಿತು. ಅಂಕಿ ಅಂಶ ಇಲಾಖೆಯ 2023-24 ಸಾಲಿನ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯ, ಜಿ ಪಂ ಸಿಇಓ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಪ್ರೋಬೇಷನರಿ ಐಎಎಸ್ ಅಧಿಕಾರಿ ಝುಪಿಶಾನ್ ಹಕ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ನಾವಿ, ಜಿಲ್ಲಾ ಸಂಖ್ಯ ಸಂಗ್ರಹಣಾಧಿಕಾರಿ ಸೋಮಶೇಖರ್ ಮೇಸ್ತಾ ಇದ್ದರು.