ಯಲ್ಲಾಪುರದ ಹುಟಕಮನೆ ಶಾಲೆ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಅವರ ಯೋಗ ಸಾಧನೆಗೆ ಒಂದೇ ದಿನ ಮೂರು ಕಡೆ ಸನ್ಮಾನ ಸಿಕ್ಕಿದೆ.
ಶನಿವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮಹಿಳಾ ಪತಂಜಲಿ ಯೋಗ ಸಮಿತಿಯವರು ಎನ್‌ಟಿಕೋ ಆವಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಸುಬ್ರಾಯ ಭಟ್ಟ ಆನೆಜಡ್ಡಿ ಅವರನ್ನು ಗೌರವಿಸಿದರು. ಡಿ ಶಂಕರ್ ಭಟ್ಟ, ವಿ ಕೆ ಭಟ್ಟ, ಶೈಲಶ್ರೀ ಭಟ್ಟ ಅವರು ಈ ವೇಳೆ ಸುಬ್ರಾಯ ಭಟ್ಟ ಅವರ ಸಾಧನೆಗೆ ಮೆಚ್ಚುಗೆವ್ಯಕ್ತಪಡಿಸಿದರು.
ಅಡಿಕೆ ಭವನದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ್ ಸ್ವಾಭಿಮಾನ ಟ್ರಸ್ಟ್ ಆಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರು ಸುಬ್ರಾಯ ಭಟ್ಟ ಆನೆಜಡ್ಡಿ ಅವರನ್ನು ಗೌರವಿಸಿದರು. ಯೋಗ ಫೆಡರೇಶನ್ ನಡೆಸಿದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದ ನೇತ್ರಾವತಿ ಭಟ್ಟ ಹಾಗೂ ಪವನ್ ಕೋಮಾರ್ ಸಹ ಇದೇ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದರು.
ರೊಜರಿ ಹೈಸ್ಕೂಲಿನಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚಂದ್ರಶೇಖರ್ ಎಸ್ ಸಿ, ಎಂ ರಾಜಶೇಖರ್ ಹಾಗೂ ವೆಂಕಟ್ರಮಣ ಭಟ್ಟ ಅವರು ಸುಬ್ರಾಯ ಭಟ್ಟ ಅವರನ್ನು ಸನ್ಮಾನಿಸಿ ಅವರ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಸುಬ್ರಾಯ ಭಟ್ಟ ಆನೆಜಡ್ಡಿ ಅವರು ರಾಷ್ಟಮಟ್ಟದ ಯೋಗಪಟುವಾಗಿ ಗುರುತಿಸಿಕೊಂಡಿದ್ದು, ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯೋಗ ಫೆಡರೇಶನ್ ನಡೆಸಿದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಸಹ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಯಲ್ಲಾಪುರದ ರವೀಂದ್ರ ನಗರದಲ್ಲಿ ಅವರು ಓಂಕಾರ ಯೋಗ ಕೇಂದ್ರ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.