ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರು ಹಾಲಕ್ಕಿ ಹಾಗೂ ಕುಣಬಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ವಿಷಯ ತಿಳಿಸಿದ್ದು, ಗೌಳಿ ಸಮುದಾಯದವರನ್ನು ಈ ಪಟ್ಟಿಯಿಂದ ಕೈ ಬಿಟ್ಟಿರುವುದಕ್ಕೆ ರಾಜ್ಯ ದನಗರಗೌಳಿ ಯುವ ಸೇನೆ ರಾಜ್ಯಾಧ್ಯಕ್ಷ ಸಂತೋಷ್ ವರಕ್ ಆಕ್ರೋಶವ್ಯಕ್ತಪಡಿಸಿದ್ದಾರೆ.
`ಗೌಳಿ ಸಮುದಾಯದವರ ಮತದ ಆಧಾರದಲ್ಲಿ ನಿರಂತರ ಗೆಲುವು ಸಾಧಿಸುತ್ತಿರುವ ಆರ್ ವಿ ದೇಶಪಾಂಡೆ ಅವರಿಗೆ ಗೌಳಿ ಜನರ ಬಗ್ಗೆ ಅನುಕಂಪವಿಲ್ಲ. ಅವರ ಸಾಮಾಜಿಕ-ಶೈಕ್ಷಣಿಕ ಬದುಕಿಗೆ ಅವರು ಯಾವುದೇ ಕೊಡುಗೆ ನೀಡಿಲ್ಲ. 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಗೌಳಿ ಸಮುದಾಯದವರನ್ನು ಆರ್ ವಿ ದೇಶಪಾಂಡೆ ಅವರು ನಿರ್ಲಕ್ಷಿಸಿದ್ದಾರೆ’ ಎಂದು ಸಂತೋಷ್ ವರಕ್ ದೂರಿದ್ದಾರೆ.
`ಗೌಳಿ ಸಮುದಾಯದವರು ಅನಾಧಿಕಾಲದಿಂದಲೂ ದಟ್ಟವಾದ ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಹೈನುಗಾರಿಕೆ ನಡೆಸಿ ಅವರು ಬದುಕು ಕಟ್ಟಿಕೊಂಡಿದ್ದು, ಆರ್ ವಿ ದೇಶಪಾಂಡೆ ಅವರು ಈ ಸಮುದಾಯದ ಒಬ್ಬ ನಾಯಕರನ್ನು ಸಹ ಬೆಳೆಸಿಲ್ಲ. ಮತಪಡೆಯಲು ಮಾತ್ರ ಗೌಳಿಗರನ್ನು ಬಳಸಿಕೊಂಡು ಉನ್ನತ ಹುದ್ದೆಪಡೆದಿರುವ ಅವರು ಮುಗ್ದ ಸಮುದಾಯಕ್ಕೆ ನ್ಯಾಯ ಕೊಡಿಸಿಲ್ಲ’ ಎಂದು ಆರೋಪಿಸಿದರು.
`ಹಾಲಕ್ಕಿ ಹಾಗೂ ಕುಣಬಿ ಸಮುದಾಯದವರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸಲು ಪ್ರಯತ್ನ ನಡೆಸಿರುವುದು ಸ್ವಾಗತಾರ್ಹ. ಆದರೆ, ಗೌಳಿಗರನ್ನು ಈ ಪಟ್ಟಿಯಿಂದ ಹೊರಗಿಟ್ಟಿರುವುದು ಸಮುದಾಯಕ್ಕೆ ಮಾಡಿದ ಅಪಮಾನ’ ಎಂದವರು ಅನಿಸಿಕೆವ್ಯಕ್ತಪಡಿಸಿದರು.