ಹಿಂದುಳಿದ ಹಿಂದು ಸಮುದಾಯದವರನ್ನು ಗುರಿಯಾಗಿರಿಸಿಕೊಂಡು ಅವರಿಗೆ ನಿರಂತರವಾಗಿ ಆಮೀಷ ಒಡ್ಡಿ ಮತಾಂತರ ನಡೆಸಲಾಗುತ್ತಿದ್ದು, ಕುಮಟಾ ಗೋಕರ್ಣ ಬಳಿ ನಡೆಯುತ್ತಿದ್ದ ಮತಾಂತರ ಪ್ರಕ್ರಿಯೆಗೆ ಅಲ್ಲಿನ ಮುಖಂಡರು ತಾತ್ಕಾಲಿಕ ತಡೆ ಒಡ್ಡಿದ್ದಾರೆ.
ಗೋಕರ್ಣದ ತಲಗೇರಿಯ ಆಗೇರ ಕಾಲೋನಿಯಲ್ಲಿ ಭಾನುವಾರ ಒಂದಷ್ಟು ಜನ ಆಗಮಿಸಿದ್ದರು. ಅವರು ಯಾರೂ ಸ್ಥಳೀಯರಾಗಿರಲಿಲ್ಲ. ಹೊರಗಿನಿಂದ ಬಂದ ಜನ ಅಲ್ಲಿನ ಮನೆಯೊಂದರಲ್ಲಿ ಜನರನ್ನು ಸೇರಿಸಿ ಏಸುವಿನ ಗುಣಗಾನ ಮಾಡುತ್ತಿದ್ದರು. ಎಲ್ಲರಿಗೂ ಪ್ರಾರ್ಥನೆ ಬೋದಿಸಿ, ಮತಾಂತರವಾಗುವoತೆ ಪ್ರೇರೇಪಿಸುತ್ತಿದ್ದರು. ಅಕ್ಕ-ಪಕ್ಕದ ಮನೆಯ ಹಿಂದು ಧರ್ಮಿಯರು ಸಹ ಆ ಮನೆಗೆ ಆಗಮಿಸಿದ್ದು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.
ಈ ವಿಷಯ ಅರಿತ ಸ್ಥಳೀಯ ಗ್ರಾ ಪಂ ಸದಸ್ಯ ಗಣಪತಿ ನಾಯ್ಕ, ಮಂಜುನಾಥ ಜನ್ನು, ಸ್ಥಳೀಯರಾದ ಸೂರ್ಯ ನಾಯಕ, ವಿಶಾಲ ನಾಯಕ, ಗಣೇಶ ನಾಯಕ, ಸಂಜೀವ ನಾಯ್ಕ, ವಿನಯ ನಾಯ್ಕ, ಸಂಜಯ ನಾಯ್ಕ, ರಾಜೇಶ ನಾಯಕ ಹಾಗೂ ಮಹೇಶ ನಾಯಕ ಅಲ್ಲಿ ದೌಡಾಯಿಸಿದರು. ಹೊರಗಿನಿಂದ ಬಂದ ಜನರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರನ್ನು ಅಲ್ಲಿಗೆ ಕರೆಯಿಸಿದ್ದು, ಪೊಲೀಸರು ಹೊರಗಿನಿಂದ ಬಂದವರನ್ನು ಅಲ್ಲಿಂದ ಓಡಿಸಿದರು. ಮತಾಂತರವಾಗಲು ಸಿದ್ಧವಾಗಿದ್ದವರಿಗೆ ಬುದ್ದಿ ಹೇಳಿದರು.
ಈ ವೇಳೆ ಪೊಲೀಸರು ಹಾಗೂ ಸ್ಥಳೀಯರ ಜೊತೆ ಕೆಲಕಾಲ ವಾಗ್ವಾದವೂ ನಡೆಯಿತು. `ಆಮೀಷ ಒಡ್ಡಿ ಬಡವರನ್ನು ಮತಾಂತರ ಮಾಡಲಾಗುತ್ತಿದೆ. ಅವರನ್ನು ಹಾಗೇ ಬಿಡಬೇಡಿ’ ಎಂದು ಜನ ಪಟ್ಟುಹಿಡಿದರು. `ಅನಾರೋಗ್ಯಕ್ಕೆ ಒಳಗಾದವರು, ಬಡವರನ್ನು ಗುರುತಿಸಿ ಅವರನ್ನು ಮತಾಂತರ ಮಾಡಲಾಗುತ್ತಿದೆ. ಪರಿಣಾಮ ಹಿಂದು ಧರ್ಮದವರ ಕತ್ತಿನಲ್ಲಿ ಶಿಲಬೆ ಆಕಾರದ ಚಿಹ್ನೆ ಕಾಣುತ್ತಿದೆ’ ಎಂದು ಅಲ್ಲಿನವರು ಅಸಮಧಾನವ್ಯಕ್ತಪಡಿಸಿದರು.