ಜೊಯಿಡಾದ ರಾಮನಗರದಲ್ಲಿ ಸರ್ಕಾರಿ ಬಸ್ಸು ಬೈಕಿಗೆ ಡಿಕ್ಕಿಯಾಗಿದ್ದರಿಂದ ಖಾನಾಪರುದ ಚಾಲಕರೊಬ್ಬರು ಸಾವನಪ್ಪಿದ್ದಾರೆ. ಬೈಕಿನಲ್ಲಿ ಜೊತೆಯಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜೂನ್ 21ರಂದು ಖಾನಾಪುರದ ಚಾಲಕ ಅನೀಲ ಪಾಟೀಲ ಅವರು ತಮ್ಮ ಬೈಕಿನಲ್ಲಿ ಜ್ಯೋತಿಬಾ ಗಡಕರಿ ಅವರನ್ನು ಜೊಯಿಡಾಗೆ ಕರೆದುಕೊಂಡು ಬಂದಿದ್ದರು. ಅವರು ರಾಮನಗರದಿಂದ ಜಗಲಪೇಟೆ ಕಡೆ ಹೋಗುತ್ತಿದ್ದರು. ಜಗಲಪೇಟೆಯ ನೈರಾ ಪೆಟ್ರೊಲ್ ಬಂಕಿನ ಬಳಿ ಅವರ ಬೈಕಿಗೆ ಬಸ್ಸು ಡಿಕ್ಕಿಯಾಯಿತು. ಪರಿಣಾಮ ಅನೀಲ ಪಾಟೀಲ ಸ್ಥಳದಲ್ಲಿಯೇ ತಮ್ಮ ಪ್ರಾಣಬಿಟ್ಟರು.
ಬೈಕಿನಲ್ಲಿ ಹಿಂದೆ ಕೂತಿದ್ದ ಜ್ಯೋತಿಬಾ ಗಡಕರಿ ಅವರು ಈ ಅಪಘಾತದಲ್ಲಿ ಗಾಯಗೊಂಡರು. ಕೆಎಸ್‌ಆರ್‌ಟಿಸಿ ಬಸ್ಸಿನ ಅತಿಯಾದ ವೇಗ ಈ ದುರಂತಕ್ಕೆ ಕಾರಣವಾಗಿದ್ದು, ಬಸ್ಸಿನ ಚಾಲಕನ ವಿರುದ್ಧ ಅನೀಲ ಪಾಟೀಲ ಅವರ ಬಾವ ಶಿವಾಜಿ ಪಾಟೀಲ ಅವರು ಪೊಲೀಸ್ ದೂರು ನೀಡಿದರು. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.