ಯಲ್ಲಾಪುರದ ಮದನೂರಿನಲ್ಲಿ ನಡೆದ ಗ್ರಾಮಸಭೆಗೆ 300ಕ್ಕೂ ಅಧಿಕ ಜನ ಆಗಮಿಸಿದ್ದರು. ಆದರೆ, ಜನರ ಸಮಸ್ಯೆ ಆಲಿಸಲು ಬರಬೇಕಿದ್ದ ಅಧಿಕಾರಿಗಳೇ ಅಲ್ಲಿ ಕಾಣಿಸಲಿಲ್ಲ!
ಧಾರಾಕಾರ ಮಳೆಯಿದ್ದರೂ ಗ್ರಾಮೀಣ ಭಾಗದ ಜನ ತಮ್ಮ ಸಮಸ್ಯೆ ಹೇಳಿಕೊಳ್ಳಲು ಗ್ರಾಮಸಭೆಗೆ ಬಂದಿದ್ದರು. ವೃದ್ಧರು-ಮಹಿಳೆಯರು ಸಹ ಗ್ರಾಮಸಭೆಯಲ್ಲಿ ಹಾಜರಿದ್ದರು. ಆದರೆ, ಅಧಿಕಾರಿಗಳಿಗೆ ಸರ್ಕಾರ ಐಷಾರಾಮಿ ಕಾರು ನೀಡಿದರೂ ಜನರ ಕಷ್ಟ ಆಲಿಸಲು ಅವರು ಗ್ರಾಮಸಭೆಗೆ ಬರಲಿಲ್ಲ. ಅಧಿಕಾರಿಗಳ ಬಗ್ಗೆ ಅಸಮಧಾನವ್ಯಕ್ತಪಡಿಸಿದ ಮದನೂರು ಗ್ರಾ ಪಂ ಅಧ್ಯಕ್ಷ ವಿಠ್ಠು ಶಳಕೆ ಗ್ರಾಮಸಭೆಯನ್ನು ಜೂನ್ 30ಕ್ಕೆ ಮುಂದೂಡಿದರು.
ಜೂನ್ 17ರಂದು ಗ್ರಾಮಸಭೆ ನಡೆಸುವ ಬಗ್ಗೆ ಎಲ್ಲಾ ಇಲಾಖೆಯವರಿಗೂ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು. ಆದರೆ, ಗ್ರಾಮೀಣ ಭಾಗದ ಜನರ ಬಗ್ಗೆ ಅಸಡ್ಡೆಹೊಂದಿರುವ ಅಧಿಕಾರಿಗಳು ಮಾತ್ರ ಸಭೆಗೆ ಹೋಗಲಿಲ್ಲ. ಮೊದಲಾದರೆ, ಅಧಿಕಾರಿಗಳು ತಮ್ಮ ಕಚೇರಿಯ ಅಧೀನ ಸಿಬ್ಬಂದಿಯನ್ನು ಗ್ರಾಮಸಭೆಗೆ ಕಳುಹಿಸುತ್ತಿದ್ದರು. ಇದೀಗ ಆ ಕೆಲಸ ಮಾಡಲು ಸಹ ಅನೇಕ ಇಲಾಖೆಯವರು ಮರೆತುಬಿಟ್ಟರು.
ಪದೇ ಪದೇ ವಿದ್ಯುತ್ ಕಡಿತದ ಬಗ್ಗೆ ತಿಳಿಸುವುದಕ್ಕಾಗಿ ವ್ಯಕ್ತಿಯೊಬ್ಬರು ಎದ್ದು ನಿಂತರು. ಆದರೆ, ಹೆಸ್ಕಾಂ ಅಧಿಕಾರಿಗಳು ಗ್ರಾಮಸಭೆಯಲ್ಲಿ ಕಾಣಲಿಲ್ಲ. ಸಾರ್ವಜನಿಕ ರಸ್ತೆ ಕುರಿತು ಮಾತನಾಡಲು ಮುಂದಾದಾಗ ಲೋಕೋಪಯೋಗಿ ಇಲಾಖೆಯವರು ಬಂದಿರಲಿಲ್ಲ. ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರ ಸಮಸ್ಯೆ ಬಗ್ಗೆ ಚರ್ಚಿಸಲು ಶಿಶು ಅಭಿವೃದ್ಧಿ ಇಲಾಖೆಯವರು ಹಾಜರಿರಲಿಲ್ಲ. ಪಿಂಚಣಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಂದಾಯ ಅಧಿಕಾರಿಗಳು ಸಭೆಯಿಂದ ದೂರವಿದ್ದರು. ರೈತರ ಅನುಕೂಲಕ್ಕಾಗಿ ಬರಬೇಕಿದ್ದ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಹೈನುಗಾರಿಕೆಯ ಅಧಿಕಾರಿಗಳು ಸಭೆಯಲ್ಲಿರಲಿಲ್ಲ.
ಮದನೂರು ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇರುವುದಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳಿದ್ದು, ಅದಕ್ಕೆ ಉತ್ತರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿರಲಿಲ್ಲ. ಕಾರ್ಮಿಕರ ಸಮಸ್ಯೆ ಆಲಿಸುವ ಕಾರ್ಮಿಕ ಅಧಿಕಾರಿ, ಸಾಮಾಜಿಕ ನ್ಯಾಯ ಕಾಪಾಡಬೇಕಿದ್ದ ಸಮಾಜ ಕಲ್ಯಾಣ ಅಧಿಕಾರಿ, ಚಿಕ್ಕ ನೀರಾವರಿ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳ ಜೊತೆ ಪೊಲೀಸ್, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಹ ಮದನೂರಿನ ಗ್ರಾಮಸಭೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ಅವರು ಸಭೆಯ ಉಸ್ತುವಾರಿ ಅಧಿಕಾರಿಯಾಗಿದ್ದರು. ಹೀಗಾಗಿ ಅವರು ಅಲ್ಲಿ ಅನಿವಾರ್ಯವಾಗಿ ಹಾಜರಿದ್ದರು. ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ವಡ್ಡರ್ ಅವರಿಗೂ ಸ್ವಾಗತದ ಜವಾಬ್ದಾರಿಯಿದ್ದು, ಅವರು ಸಭೆಯಲ್ಲಿದ್ದರು. ಉಳಿದ ಇಲಾಖೆ ಅಧಿಕಾರಿಗಳ ಅನುಪಸ್ಥಿತಿಯ ಬಗ್ಗೆ ಜನ ಆಕ್ರೋಶವ್ಯಕ್ತಪಡಿಸಿದರು.
ಇದೇ ಸಭೆಯಲ್ಲಿ ಗೈರಾಗಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಬಗ್ಗೆ ನಿರ್ಣಯಿಸಲಾಯಿತು. ಜೂನ್ 30ರ ಸೋಮವಾರ ಬೆಳಗ್ಗೆ 11ಗಂಟೆಗೆ ಮದನೂರಿನ ವಿಠ್ಠಲ ರುಕ್ಮಯಿ ದೇವಸ್ಥಾನ ಸಭಾಭವನದಲ್ಲಿ ಮತ್ತೊಮ್ಮೆ ಗ್ರಾಮಸಭೆ ನಡೆಸಲು ನಿರ್ಧರಿಸಲಾಯಿತು.