ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಸಂಚರಿಸುತ್ತಿದ್ದ ಕಾರನ್ನು ಹಿಂದಿಕ್ಕಿದ ಕೆಲವರು ಸಂಸದರ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದು, ಇದೇ ವಿಷಯವಾಗಿ ತುಮಕೂರಿನ ಬಳಿ ಹೊಡೆದಾಟ ನಡೆದಿದೆ.
ಬೆಂಗಳೂರಿನ ಹೊರವಲಯದ ಹಳೆ ನಿಜಗಲ್ ಬಳಿ ಈ ಹೊಡೆದಾಟ ನಡೆದಿದೆ. ಹೊಡೆದಾಟ ವಿಷಯವಾಗಿ ಅನಂತಕುಮಾರ ಹೆಗಡೆ ಅವರ ಪುತ್ರ, ಕಾರು ಚಾಲಕ ಹಾಗೂ ಗನ್‌ಮ್ಯಾನ್ ವಿರುದ್ಧ ದಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಳೆ ನಿಜಗಲ್ ಬಳಿ ಅನಂತಕುಮಾರ ಹೆಗಡೆ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅದನ್ನು ಮುಗಿಸಿ ಅವರು ಸಿಂಗಾಪುರಕ್ಕೆ ಹೋಗಬೇಕಿದ್ದು, ಬೆಂಗಳೂರಿನ ಕಡೆ ಹೊರಟಿದ್ದರು. ಆಗ, ಇನ್ನಷ್ಟು ವೇಗವಾಗಿ ಕಾರೊಂದು ಆಗಮಿಸಿ ಅನಂತಕುಮಾರ ಹೆಗಡೆ ಅವರಿದ್ದ ಕಾರನ್ನು ಹಿಂದಿಕ್ಕಿತು. ಅದಾದ ನಂತರ ಮುಂದೆ ಚಲಿಸಿದ ಕಾರಿನವರು ಅನಂತಕುಮಾರ ಹೆಗಡೆ ಅವರ ಕಾರಿನಲ್ಲಿದ್ದವರನ್ನು ನಿಂದಿಸಿದರು. ಇದೇ ವಿಷಯವಾಗಿ ಎರಡು ಕಾರಿನಲ್ಲಿದ್ದವರ ನಡುವೆ ವಾಗ್ವಾದ ನಡೆದಿದ್ದು, ಹೊಡೆದಾಟಕ್ಕೆ ಕಾರಣವಾಯಿತು.
ಇನ್ನೊಂದು ಕಾರನ್ನು ಸೈಫ್ ಖಾನ್ ಎಂಬಾತರು ಚಲಾಯಿಸುತ್ತಿದ್ದರು. ಕಾರು ಓವರ್‌ಟೆಕ್ ಮಾಡಲು ಆಗಲಿಲ್ಲ ಎಂಬ ಕಾರಣಕ್ಕೆ ಸೈಫ್ ಖಾನ್ ಅಡ್ಡಾದಿಡ್ಡಿ ಕಾರು ಓಡಿಸಿದ್ದು, ಕೊನೆಗೂ ಅನಂತಕುಮಾರ ಹೆಗಡೆ ಅವರು ಕೂತಿದ್ದ ಕಾರನ್ನು ಹಿಂದಿಕ್ಕಿ ಮುಂದೆ ಸಾಗಿದರು. ಅಡ್ಡಾದಿಡ್ಡಿ ಕಾರು ಓಡಿಸಿದ ವಿಷಯವಾಗಿ ಅನಂತಕುಮಾರ ಹೆಗಡೆ ಅವರ ಕಾರಿನ ಚಾಲಕ ಸೈಫ್ ಖಾನ್ ಅವರನ್ನು ಪ್ರಶ್ನಿಸಿರುವುದೇ ಹೊಡೆದಾಟಕ್ಕೆ ಕಾರಣವಾಯಿತು. ಸದ್ಯ ಸೈಫ್ ಖಾನ್ ಕುಟುಂಬದವರ ಮೇಲೆ ಅನಂತಕುಮಾರ ಹೆಗಡೆ ಕಾರಿನಲ್ಲಿದ್ದ ಜನ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.
ಸೈಫ್ ಖಾನ್ ಅವರ ಕುಟುಂಬದ ಸದಸ್ಯರು ಕಾರಿನ ಒಳಗಿನಿಂದ ಹೊಡೆದಾಟದ ದೃಶ್ಯಾವಳಿಗಳನ್ನು ರೆಕಾರ್ಡ್ ಮಾಡಿದ್ದಾರೆ. ಹೊಡೆದಾಟದಲ್ಲಿ ಸೈಫ್ ಖಾನ್ ಅವರ ಹಲ್ಲು ಮುರಿದಿದೆ. ನೆಲಮಂಗಲದಲ್ಲಿರುವ ಪೊಲೀಸ್ ಉಪಅಧೀಕ್ಷಕರ ಕಚೇರಿಯಲ್ಲಿ ಪೊಲೀಸರು ಅನಂತಕುಮಾರ ಹೆಗಡೆ ಅವರನ್ನು ವಿಚಾರಣೆಗೊಳಪಡಿಸಿ ಬಿಡುಗಡೆ ಮಾಡಿದ್ದಾರೆ. ಇದರಿಂದ ಆಕ್ರೋಶವ್ಯಕ್ತಪಡಿಸಿದ ಸೈಫ್ ಖಾನ್ ಅನಂತಕುಮಾರ ಹೆಗಡೆ ಬಂಧನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಅನಂತಕುಮಾರ ಹೆಗಡೆ ಗನ್ ಮ್ಯಾನ್ ಹಾಗೂ ಚಾಲಕನ ಬಂಧನವಾಗಿದೆ. ಅನಂತಕುಮಾರ ಹೆಗಡೆ ತಮ್ಮ ಪೂರ್ವನಿಗದಿತ ಕಾರ್ಯಕ್ರಮದಂತೆ ವಿದೇಶಕ್ಕೆ ತೆರಳಿದ್ದಾರೆ.