ಯಲ್ಲಾಪುರದ ಇಡಗುಂದಿ ಬಳಿ ಹೆದ್ದಾರಿ ಅಂಚಿನಲ್ಲಿ ಲಾರಿ ನಿಂತಿದ್ದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ ನಡೆದ ಈ ಅಪಘಾತದಲ್ಲಿ 14 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಬಳ್ಳಾರಿ ಸಂಜಯಗಾoಧಿ ಡಿಪ್ಲೊಮೊ ಕಾಲೇಜಿನ ವಿದ್ಯಾರ್ಥಿಗಳು ಮುರುಡೇಶ್ವರ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿಂದ ಮರಳುವಾಗ ಈ ಅಪಘಾತ ನಡೆದಿದೆ. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ 6 ಜನರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಸಾಗಿಸಲಾಗಿದೆ.
ಕೊಪ್ಪಳದ ಶಿವಕುಮಾರ್ ಅವರು ತಮ್ಮ ಲಾರಿಯನ್ನು ಹೆದ್ದಾರಿ ಅಂಚಿನಲ್ಲಿ ಅಪಾಯಕಾರಿ ರೀತಿಯಲ್ಲಿ ನಿಲ್ಲಿಸಿದ್ದರು. ತಮಿಳುನಾಡಿನ ಕೆ ವೇಲು ಅವರು ಲಾರಿ ಓಡಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಹಗರಿಬೊಮ್ಮನಳ್ಳಿಯ ನಾಗರಾಜ ಹಿಟ್ನಳ್ಳಿ ಅವರು ವಿದ್ಯಾರ್ಥಿಗಳಿದ್ದ ಟಿಟಿಯನ್ನು ಜೋರಾಗಿ ಓಡಿಸಿಕೊಂಡು ಬಂದರು. ಮುಂದಿದ್ದ ಲಾರಿಯನ್ನು ಹಿಂದಿಕ್ಕುವ ಗಡಬಡಿಯಲ್ಲಿ ಯಲ್ಲಾಪುರ ಕಡೆಯಿಂದ ಬರುತ್ತಿದ್ದ ಲಾರಿಗೆ ಟಿಟಿ ಗುದ್ದಿದರು.
ಪರಿಣಾಮ ಟಿಟಿ ಪಲ್ಟಿಯಾಯಿತು. ವಿಜಯನಗರದ ವಿಜಯನಗರ ಹೊಸಪೇಟೆಯ ಕೆಬಿ ಗಾದೇಶ, ಕುರುಬರ ಕೋರಿ ಶ್ರೀಕಾಂತ ಉಕ್ಕಳ್ಳಿ, ಕುಮಾರ ಕೋರವರ, ಗಾದಿಲಿಂಗ ಶೆಕ್ಸವಲ್ಲಪ್ಪ, ಕೆ ಪ್ರಜ್ವಲ್, ಕೋರಿ ಮಹೇಶ, ಕೆ ಎರಿಸ್ವಾಮಿ, ಕಾಗಿ ಸಿದ್ದರಾಮ ಈ ಅಪಘಾತದಲ್ಲಿ ಗಾಯಗೊಂಡರು. ಅವರ ಜೊತೆ ಬಳ್ಳಾರಿಯ ರಾಜು ಕೆ, ಸಿ ಕಾರ್ತಿಕ್, ಕೆ ಎಂ ನಾಗರಾಜ, ಯು ಸಾಗರ್ ಸಹ ಪೆಟ್ಟು ಮಾಡಿಕೊಂಡರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.