ಅಂಕೋಲಾದ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಟ್ಟು ಏಳು ಜನ ಜೂಜುಕೋರರು ಸಿಕ್ಕಿ ಬಿದ್ದಿದ್ದಾರೆ.
ಅಂಕೋಲಾ ಬೆಳಂಬಾರದ ಉತ್ತರಖಾರ್ವಿವಾಡದ ಅರಣ್ಯ ಪ್ರದೇಶದಲ್ಲಿ ಜೂನ್ 22ರಂದು ಜೂಜಾಟ ನಡೆಯುತ್ತಿತ್ತು. ಮಂಜಗುಣಿಯ ಮೀನುಗಾರ ಬೀರಣ್ಣ ನಾಯ್ಕ, ಬೆಳಂಬಾರ ತಾಳಬೈಕಿನ ಆಚಾರಿ ರವಿ ಶೆಟ್ಟಿ, ಬೆಳಂಬಾರ ಮಧ್ಯಖಾರ್ವಿವಾಡದ ಮೀನುಗಾರ ಜಗದೀಶ ಖಾರ್ವಿ ಜೊತೆಗೆ ಬೆಳಂಬಾರದ ರಿಕ್ಷಾ ಚಾಲಕ ರವಿ ಗೌಡ ಸೇರಿ ಜೂಜಾಡುತ್ತಿದ್ದರು. ಬೆಳಂಬಾರ ಮುಂದ್ರಾಣಿಯ ಕಟ್ಟಡ ಕಾರ್ಮಿಕ ರಾಜೇಶ ಗೌಡ, ಶೆಟ್ಟಗೇರಿಯ ರೈತ ಸತೀಶ ನಾಯ್ಕ, ಬೆಳಂಬಾರ ಉತ್ತರಖಾರ್ವಿವಾಡದ ಮೀನುಗಾರ ಆನಂದ ಖಾರ್ವಿ ಸಹ ಅವರ ಜೊತೆಗಾರರಾಗಿದ್ದರು.
ಜೂಜಾಟದ ಬಗ್ಗೆ ಮಾಹಿತಿ ಅರಿತ ಅಂಕೋಲಾ ಪಿಎಸ್‌ಐ ಪಿಎಸ್‌ಐ ಉದ್ದಪ್ಪ ಧರಪ್ಪನವರ್ ತಮ್ಮ ತಂಡದೊAದಿಗೆ ಅಲ್ಲಿಗೆ ಹೋದರು. ಇಸ್ಪಿಟ್ ಎಲೆಗಳನ್ನು ಹರಡಿಕೊಂಡು `ಹೊರಗೆ 500ರೂ ಒಳಗೆ 500ರೂ’ ಎನ್ನುತ್ತಿದ್ದವರನ್ನು ಅವರು ವಿಚಾರಣೆಗೆ ಒಳಪಡಿಸಿದರು. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಎಲ್ಲರನ್ನು ಹಿಡಿದರು. ಅಲ್ಲಿದ್ದ ಸಾಮಗ್ರಿಗಳ ಜೊತೆ 7250ರೂ ಹಣವನ್ನು ವಶಕ್ಕೆಪಡೆದರು. ಜೂಜುಕೋರರ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಅಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಿದರು.