ಮದುವೆ ಮನೆಯಲ್ಲಿ ಚಪ್ಪಲಿ, ಮಳೆಗಾಲದಲ್ಲಿ ಛತ್ರಿ ಬದಲಾಗುವುದು ಸಾಮಾನ್ಯ. ಆದರೆ, ಸೋಮವಾರ ರಾತ್ರಿ ಬೈಕ್ ಬದಲಾಗಿದೆ. ಈ ವಿಷಯವಾಗಿ ಪೊಲೀಸರು ತಲೆಕೆಡಿಸಿಕೊಂಡಿದ್ದು, ಕೊನೆಗೂ ಪೊಲೀಸರು ಬೈಕ್ ಹುಡುಕಿ ಮಾಲಕರಿಗೆ ಒಪ್ಪಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿ ಅನಂತ ಖರೆ ಎಂಬಾತರು ಸೋಮವಾರ ರಾತ್ರಿ ಹೊಟೇಲಿಗೆ ಹೋಗಿದ್ದರು. ಅಲ್ಲಿಂದ ಹೊರಬಂದು ನೋಡಿದಾಗ ಅವರ ಬೈಕ್ ಕಾಣಲಿಲ್ಲ. ಸುತ್ತಲು ಹುಡುಕಾಟ ನಡೆಸಿದರೂ ಬೈಕ್ ಸಿಗಲಿಲ್ಲ. ಬೈಕಿನ ಕೀ ಮಾತ್ರ ಅನಂತ ಅವರ ಬಳಿಯೇ ಇತ್ತು. ಹೀಗಾಗಿ `ತನ್ನ ಬೈಕ್ ಕಳ್ಳತನವಾಗಿದೆ’ ಎಂದು ಭಾವಿಸಿ ಅವರು ಪೊಲೀಸರಿಗೆ ಫೋನ್ ಮಾಡಿದರು.
ಅನಂತ ಖರೆ ಅವರು ಬೈಕ್ ನಿಲ್ಲಿಸಿದ ಅನತಿ ದೂರದಲ್ಲಿ ಇನ್ನೊಂದು ಬೈಕ್ ನಿಂತಿತ್ತು. ಅದು ಸಹ ಅನಂತ ಖರೆ ಅವರ ಬೈಕಿನಂತೆ ಇದ್ದರೂ ನೋಂದಣಿ ಸಂಖ್ಯೆ ಅವರದ್ದಾಗಿರಲಿಲ್ಲ. ಆ ಬೈಕ್ ಮಾಲಕರನ್ನು ಹುಡುಕಾಡಿದ ಪೊಲೀಸರಿಗೆ ತದಡಿಯ ವ್ಯಕ್ತಿಯೊಬ್ಬರ ಫೋನ್ ನಂ ಸಿಕ್ಕಿತು. ಅಲ್ಲಿ ಫೋನ್ ಮಾಡಿದಾಗ ಆ ಮೊಬೈಲ್ `ಸ್ವಿಚ್ ಆಫ್’ ಎಂದಿತು.
ಅದಾಗಿಯೂ ಪಟ್ಟುಬಿಡದ ಪೊಲೀಸರು ಮತ್ತೆ ಮತ್ತೆ ಫೋನ್ ಮಾಡುತ್ತಿದ್ದರು. ಅಕ್ಕಪಕ್ಕದ ಮನೆಗಳಿಗೂ ಫೋನ್ ಮಾಡಿ ತದಡಿ ವ್ಯಕ್ತಿಯನ್ನು ಸಂಪರ್ಕಿಸಿದರು. ಫೋನ್ ಕರೆ ಸ್ವೀಕರಿಸಿದ ಆ ವ್ಯಕ್ತಿ ಹೊಸ ರಾಗ ತೆಗೆದರು. `ನನ್ನ ಬೈಕ್ ಹಾಳಾಗಿದೆ. ಅದನ್ನು ಡಿಸಿಸಿ ಬ್ಯಾಂಕಿನ ಬಳಿ ಬಿಟ್ಟಿದ್ದೇನೆ’ ಎಂದು ಆ ವ್ಯಕ್ತಿ ಹೇಳಿದರು. ಪೊಲೀಸರು ಬ್ಯಾಂಕಿನ ಬಳಿ ಹುಡುಕಾಟ ನಡೆಸಿದರು. ಅಲ್ಲಿ ಅನಂತ ಖರೆ ಅವರ ಬೈಕ್ ಸಿಕ್ಕಿತು.
`ತದಡಿಯ ವ್ಯಕ್ತಿ ಗಡಿಬಿಡಿಯಲ್ಲಿ ಅನಂತ ಖರೆ ಅವರ ಬೈಕಿಗೆ ಕೀ ಅಳವಡಿಸಿದ್ದು, ಬೈಕ್ ಚಾಲು ಆಗಿಲ್ಲ. ಹೀಗಾಗಿ ಬೈಕ್ ಹಾಳಾಗಿದೆ ಎಂದು ಭಾವಿಸಿ ಅವರು ಆ ಬೈಕನ್ನು ದೂಡಿಕೊಂಡು ಗ್ಯಾರೇಜ್ ಕಡೆ ಹೋಗಿದ್ದರು. ಸುಸ್ತಾದ ಕಾರಣ ಬ್ಯಾಂಕಿನ ಬಳಿ ಬಿಟ್ಟು ಮನೆಗೆ ಹೋದರು’ ಎಂಬ ವಿಷಯ ನಂತರ ಎಲ್ಲರ ಅರಿವಿಗೆ ಬಂದಿತು.
ವರ್ಷದ ಹಿಂದೆ ಇದೇ ಸ್ಥಳದಲ್ಲಿ ಬೈಕ್ ಕಳ್ಳತನ ನಡೆದಿದ್ದರಿಂದ ಜನ ಆತಂಕಗೊoಡಿದ್ದು, ಇದೀಗ ಸತ್ಯ ಅರಿತು ನಕ್ಕು ಹಗುರಾದರು. ಕೊನೆಗೆ ಆ ತದಡಿ ವ್ಯಕ್ತಿಯನ್ನು ಕರೆಯಿಸಿ ಆದ ವಿಷಯ ತಿಳಿಸಿದರು. ಬೈಕಿನ ನೋಂದಣಿ ನೋಡಿ ಅವರು ಸತ್ಯವನ್ನು ಒಪ್ಪಿಕೊಂಡರು. ಕತ್ತಲಿನಲ್ಲಿ ಕಪ್ಪು ಬಣ್ಣದ ಎರಡು ಬೈಕ್ ಒಂದೇ ಕಡೆ ಬಿಟ್ಟಿದ್ದರಿಂದ ಈ ಸಮಸ್ಯೆ ಆಗಿದ್ದನ್ನು ಎರಡು ಬೈಕಿನ ಮಾಲಕರು ಅರ್ಥ ಮಾಡಿಕೊಂಡರು. ಪಿಎಸ್ಐ ಶಶಿಧರ್, ಸಿಬ್ಬಂದಿ ಮಹಮ್ಮದ ಅಲಿ ಈ ಕಾರ್ಯಾಚರಣೆಯಲ್ಲಿದ್ದರು.