ಮುಂಡಗೋಡದ ನಾಗನೂರು ಅಂಗನವಾಡಿ ಕೇಂದ್ರದ ನೇಮಕಾತಿ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆ ಭಾಗದ ಜನ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದಿದ್ದಾರೆ. ಆಯ್ಕೆ ಪ್ರಕ್ರಿಯೆ ರದ್ಧು ಮಾಡಬೇಕು ಎಂದು ಸೋಮವಾರ ಅಲ್ಲಿನವರು ಪ್ರತಿಭಟಿಸಿದರು.
`ಈ ಗ್ರಾಮದಲ್ಲಿ ಈಗಾಗಲೇ ಒಂದು ಅಂಗನವಾಡಿಯಿದೆ. ಹೊಸದಾಗಿ ಮತ್ತೊಂದು ಅಂಗನವಾಡಿ ಮಂಜೂರಿಯಾಗಿದೆ. ಹೊಸ ಅಂಗನವಾಡಿಗೆ ಸ್ಥಳೀಯ ಅಭ್ಯರ್ಥಿ ನೇಮಕಾತಿ ನಡೆದಿಲ್ಲ’ ಎಂದು ದೂರಿದರು. `ಹೊಸ ಕಟ್ಟಡ ಕೆಲಸ ಮುಗಿಯದ ಕಾರಣ ಹಳೆ ಅಂಗನವಾಡಿಗೆ ಹೊಸ ಶಿಕ್ಷಕರು ಬಂದಿದ್ದಾರೆ. ಅವರು ಸ್ಥಳೀಯರಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.
`ನಿಯಮಗಳ ಪ್ರಕಾರ ಸ್ಥಳೀಯ ಅಭ್ಯರ್ಥಿಯನ್ನು ಮಾತ್ರ ನೇಮಿಸಬೇಕು. ಹೊರಗಿನವರನ್ನು ಇಲ್ಲಿ ನೇಮಿಸಿದ್ದರಿಂದ ಸ್ಥಳೀಯರಿಗೆ ಅನ್ಯಾಯವಾಗಿದೆ’ ಎಂದು ದೂರಿದರು. `ತಮ್ಮ ಬೇಡಿಕೆ ಈಡೇರುವವರೆಗೂ ಅಂಗನವಾಡಿ ಕೇಂದ್ರದ ಬೀಗ ತೆರೆಯಲ್ಲ’ ಎಂದು ಪಟ್ಟು ಹಿಡಿದರು.
ಆ ಭಾಗದ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣ, ಯಶೋಧಾ ಪಾಟೀಲ, ನಾರಾಯಣ ವಡ್ಡರ, ರಮೇಶ ಜನಗೇರಿ, ಪ್ರಶಾಂತ ಭದ್ರಾಪುರ, ಗಣಪತಿ ಬದನಗೋಡ, ಸಾವಿತ್ರಿ ವಡ್ಡರ, ಕವಿತಾ ಭದ್ರಾಪುರ, ಗೌರಕ್ಕ ವಡ್ಡರ ಜೊತೆ ಮಕ್ಕಳು ಪ್ರತಿಭಟನೆಯಲ್ಲಿದ್ದರು.