ಶಿರಸಿಗೆ ಖಾಯಂ ತಹಶೀಲ್ದಾರರನ್ನು ನೇಮಿಸಬೇಕು ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಕಾರವಾರದಲ್ಲಿ ಧರಣಿ ನಡೆಸಿದ್ದು, ಗ್ರೇಡ್-2 ತಹಶೀಲ್ದಾರ್ ರಮೇಶ ಹೆಗಡೆ ಅವರಿಗೆ ಗ್ರೇಡ್-1ರ ಪ್ರಭಾರ ಅಧಿಕಾರ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕಳೆದ ನಾಲ್ಕು ತಿಂಗಳಿoದ ಶಿರಸಿಗೆ ಖಾಯಂ ತಹಶೀಲ್ದಾರ್ ಇರಲಿಲ್ಲ. ದಾಂಡೇಲಿ ಹಾಗೂ ಮುಂಡಗೋಡಿನ ತಹಶೀಲ್ದಾರರನ್ನು ಪ್ರಭಾರಿಯಾಗಿ ಇಲ್ಲಿ ನೇಮಿಸಲಾಗುತ್ತು. ಮೇ 19ರಂದು ಈ ಬಗ್ಗೆ ಅನಂತಮೂರ್ತಿ ಹೆಗಡೆ ಧ್ವನಿಯೆತ್ತಿದ್ದರು. ಆ ವೇಳೆ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು. ಆದರೆ, ಇದಕ್ಕೆ ಜಿಲ್ಲಾಡಳಿತ ತಲೆಕೆಡಿಸಿಕೊಂಡಿರಲಿಲ್ಲ. ಸೋಮವಾರ ಬಿಜೆಪಿಗರು ಕಾರವಾರದಲ್ಲಿ ಪ್ರತಿಭಟನೆ ನಡೆಸಿದ್ದು, ಈ ವೇಳೆಯಲ್ಲಿಯೇ ರಮೇಶ ಹೆಗಡೆ ಅವರಿಗೆ ಅಧಿಕಾರ ಹಸ್ತಾಂತರದ ಆದೇಶವಾಯಿತು.
ಮೊದಲು ವಾರಕ್ಕೆ ಒಂದು ದಿನ ಮಾತ್ರ ತಹಶೀಲ್ದಾರ್ ಶಿರಸಿಗೆ ಬರುತ್ತಿದ್ದರು. ಇದೀಗ ಶಿರಸಿಯಲ್ಲಿ ಯೋಗ್ಯ ಅಧಿಕಾರಿ ಇದ್ದರೂ ಅವರಿಗೆ ತಹಶೀಲ್ದಾರ್ ಹುದ್ದೆ ನೀಡಿರಲಿಲ್ಲ. ನಮ್ಮ ಹೋರಾಟದ ಪರಿಣಾಮ ಗ್ರೇಡ್ -2 ತಹಶೀಲ್ದಾರ್’ಗೆ ಗ್ರೇಡ್ – 1 ಹುದ್ದೆ ನೀಡಲಾಗಿದ್ದು, ಇದರಿಂದ ಜನರ ಸಮಸ್ಯೆ ಬಗೆಹರಿಯಲಿದೆ. ಇದು ಹೋರಾಟಕ್ಕೆ ಸಿಕ್ಕ ಜಯ’ ಎಂದು ಅನಂತಮೂರ್ತಿ ಹೆಗಡೆ ಪ್ರತಿಕ್ರಿಯಿಸಿದರು.
`ಭ್ರಷ್ಟ ಕಾಂಗ್ರೆಸ್ ಸರಕಾರದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಬೆಲೆಯಿಲ್ಲ. ಶಿರಸಿ ದೊಡ್ಡ ತಾಲೂಕು ಆಗಿದ್ದರೂ ಅಧಿಕಾರಿಗಳ ನೇಮಕಾತಿ ಆಗಿರಲಿಲ್ಲ. ಉಪವಿಭಾಗಾಧಿಕಾರಿ ಸಹ ಪ್ರಭಾರಿ ಹುದ್ದೆಯಲ್ಲಿದ್ದು, ಜನರ ಸಮಸ್ಯೆ ಆಲಿಸುವರು ಇರಲಿಲ್ಲ. ಇಂಥ ಪರಿಸ್ಥಿತಿ ಶಾಸಕ ಭೀಮಣ್ಣ ನಾಯ್ಕರಿಗೂ ಶೋಭೆ ತರುವುದಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಹೋರಾಟದ ವೇಳೆ ಹೇಳಿದರು. ಪ್ರಮುಖರಾದ ಉಷಾ ಹೆಗಡೆ, ನಾರಾಯಣ ಹೆಗಡೆ, ಚಂದ್ರಶೇಖರ ಹೆಗಡೆ, ಮಂಜುನಾಥ ಪಾಟೀಲ್ ದಾಸನಕೊಪ್ಪ, ರವಿ ದೇವಾಡಿಗ, ನಿರ್ಮಲಾ ಇತರರು ಮಾತನಾಡಿದರು.