ಯಲ್ಲಾಪುರ: ತಾಲೂಕಿನ ಹುಟಕಮನೆ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಹೊಂದಿಕೊಂಡು ಇರುವ ಮಾಲ್ಕಿ ಜಮೀನು ಸಮತಟ್ಟು ಮಾಡುವಾಗ ಅಕ್ರಮವಾಗಿ ಮರ ಹೂತು ಹಾಕಿದ್ದ ಆರೋಪ ಕೇಳಿ ಬಂದಿತ್ತು. ಜೋರಾದ ಮಳೆಯಿಂದ ಮಣ್ಣು ಕೊಚ್ಚಿಹೋಗಿ ಹೂತು ಹಾಕಿರುವ ಮರಗಳು ಗೋಚರಿಸಲಾರಂಭಿಸಿವೆ.
ಕಳೆದ ಬೇಸಿಗೆಯಲ್ಲಿ ಹುಟುಕಮನೆ ಬಳಿ ಗುಡ್ಡ ತೆರವು ಮಾಡುವಾಗ ಅರಣ್ಯ ಇಲಾಖೆ ಮತ್ತು ಮಾಲ್ಕಿ ಜಮೀನು ಸರ್ವೆ ನಡೆಸಿರಲಿಲ್ಲ. ಅರಣ್ಯ ಇಲಾಖೆ ಜಾಗವನ್ನೂ ಸೇರಿ ಗುಡ್ಡ ತೆರವು ಮಾಡಿದ್ದೂ, ಅಲ್ಲಿನ ಬೆಲೆ ಬಾಳುವ ಮರಗಳನ್ನು ಕಡಿದು ಜೆಸಿಬಿ ಯಂತ್ರ ಬಳಸಿ ಹೂತು ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಗಡೆ ಹತ್ತಾರು ಬಾರಿ ವಲಯ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇಷ್ಟಾಗಿಯೂ ಯಾವುದೇ ಮರಗಳಿಲ್ಲ ಎಂದು ಇಲಾಖೆಯವರು ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದರು. ಈಗ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಮಳೆಯಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಹೂತಿಟ್ಟಿದ್ದ ಮರಗಳು ಕಾಣತೊಡಗಿವೆ.
ಈಗಲಾದರೂ ಮರಗಳ ಮರಣ ಹೋಮ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ, ಮರಗಳನ್ನು ಸೀಜ್ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಜುನಾಥ ಹೆಗಡೆ ಒತ್ತಾಯಿಸಿದ್ದಾರೆ.