ಮುಂಡಗೋಡ : ತಾಲೂಕಿನ ಮಳಗಿ ಪಂಚಾಯತಿ ವ್ಯಾಪ್ತಿಯ ಧರ್ಮಾ ಜಲಾಶಯ ಭರ್ತಿಯಾಗಿ ಕೋಡಿ ಹರಿಯುತ್ತಿದ್ದು ರೈತರಲ್ಲಿ ಸಂತಸ ಮೂಡಿದರೆ, ಪ್ರವಾಸಿಗರು ತಂಡೋಪತಂಡವಾಗಿ ಬಂದು ಜಲಾಶಯದ ಸೊಬಗನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ.
ಧರ್ಮಾ ಜಲಾಶಯ ಭರ್ತಿಯಾಗಿದೆ ಎಂಬ ಸುದ್ದಿಯಿಂದ ತಾಲೂಕಿನವರಿಗಿಂತ ಹಾನಗಲ್ ತಾಲೂಕಿನವರೇ ಹೆಚ್ಚು ಖುಷಿಯಲ್ಲಿದ್ದಾರೆ. ಏಕೆಂದರೆ ಈ ಧರ್ಮಾ ಜಲಾಶಯದ ನೀರು ಮುಂಡಗೋಡ ತಾಲೂಕಿನ ರೈತರಿಗಿಂತ ಹಾನಗಲ್ ತಾಲೂಕಿನ ರೈತರಿಗೇ ಹೆಚ್ಚು ಉಪಯೋಗ.
ಧರ್ಮಾ ಜಲಾಶಯ ಭರ್ತಿಯಾಗಿರುವುದರಿಂದ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ. ಸತತ ಮೂರು ವರ್ಷದಿಂದ ಜಲಾಶಯ ಭರ್ತಿಯಾಗಿ ಕೋಡಿ ಬೀಳುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಕೋಡಿ ಬೀಳುವ ಸ್ಥಳದಲ್ಲಿ ನಿಂತು ಪೋಟೊ ಕ್ಲಿಕಿಸಿಕೊಂಡು ಕೆಲ ಸಮಯ ಕಳೆದು ಜಲಾಶಯದ ಮನೋಹರ ದೃಶ್ಯವನ್ನು ಕಣ್ಣುಂಬಿಸಿಕೊಂಡು ಹೋಗುತ್ತಿದ್ದಾರೆ.