ಯಲ್ಲಾಪುರ: ಪಟ್ಟಣದ ಶಾರದಾಗಲ್ಲಿಯ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ಗುರುವಾರ ಗುರುಪೂರ್ಣಿಮೆ ಹಾಗೂ ಪತ್ರಿಕಾ ದಿನ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಕೆ.ಶಿವಲೀಲಾ ಮಾತನಾಡಿ, ಬದುಕಿನ ದಾರಿ ತೋರಿಸುವ ಗುರುವಿನ ಸ್ಥಾನ ಸಮಾಜದಲ್ಲಿ ಹಿರಿದಾದದ್ದು. ಗುರುವಿನ ಮಾರ್ಗದರ್ಶನದಂತೆ ಸಾಗುವುದು, ಗುರು-ಹಿರಿಯರನ್ನು ಗೌರವಿಸುವುದೇ ಗುರುವಿಗೆ ನೀಡುವ ದೊಡ್ಡ ಕಾಣಿಕೆಯಾಗಿದೆ ಎಂದರು.
ಪತ್ರಿಕೆಗಳು ಸಮಾಜದ ಆಗುಹೋಗುಗಳನ್ನು ಬಿಂಬಿಸುವ ಕನ್ನಡಿಯಾಗಿದೆ. ಸೇವಾ ಮನೋಭಾವದ ಪತ್ರಕರ್ತರನ್ನು ಗುರುತಿಸಿ, ಗೌರವಿಸಿ, ಅವರ ಕಾರ್ಯಕ್ಕೆ ಬೆಂಬಲ ನೀಡುವ ಕೆಲಸ ಸಮಾಜದ ಪ್ರತಿಯೊಬ್ಬರಿಂದ ಆಗಬೇಕು ಎಂದರು.
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ ಮಾತನಾಡಿ, ಪತ್ರಿಕೆ ಸಾಮಾಜಿಕ ಪರಿವರ್ತನೆಯಲ್ಲಿ ಪತ್ರಿಕೆಯ ಪಾತ್ರ ದೊಡ್ಡದು ಎಂದರು.
ಪತ್ರಕರ್ತ ನಾಗರಾಜ ಮದ್ಗುಣಿ ಮಾತನಾಡಿ, ಪತ್ರಕರ್ತರು ಸಾಮಾಜಿಕ ಬದಲಾವಣೆ ಹಾಗೂ ಜಾಗೃತಿಯ ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ಬೆಂಬಲವೂ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತರನ್ನು ಗೌರವಿಸಲಾಯಿತು. ಪತ್ರಕರ್ತರಾದ ಸುಬ್ರಾಯ ಬಿದ್ರೆಮನೆ, ಶ್ರೀಧರ ಅಣಲಗಾರ, ಪ್ರಭಾವತಿ ಗೋವಿ, ಕೇಬಲ್ ನಾಗೇಶ, ಜಯರಾಜ ಗೋವಿ ಮಾತನಾಡಿದರು. ಬಿ.ಕೆ.ವೀಣಾ ವಂದಿಸಿದರು.