ಯಲ್ಲಾಪುರ: ತಾಲೂಕಿನ ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ನ 20 ನೇ ವಾರ್ಷಿಕೋತ್ಸವ ಆನಗೋಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ರಾತ್ರಿ ನಡೆಯಿತು.
ಟ್ರಸ್ಟ್ ನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಅನಂತ ಹೆಗಡೆ ದಂತಳಿಗೆ ವಿರಚಿತ ಶ್ರೀರಾಮ ದರ್ಶನ ಯಕ್ಷಗಾನ ಅನಂತ ಹೆಗಡೆ ಹಾಗೂ ಸದಾಶಿವ ಭಟ್ಟ ಮಾರ್ಗದರ್ಶನದಲ್ಲಿ ಪ್ರದರ್ಶನಗೊಂಡಿತು. ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಪ್ರಮೋದ ಕಬ್ಬಿನಗದ್ದೆ ಭಾಗವಹಿಸಿದ್ದರು.
ರಾಮ-ರಾವಣರ ಯುದ್ಧದ ಸಂದರ್ಭದಲ್ಲಿ ವಿಶ್ವರೂಪ ದರ್ಶನವಾದಾಗ ರಾವಣನಿಂದ ರಾಮನ ವರ್ಣನೆ, ವಿಷ್ಣುವಿನ ಅವತಾರಗಳು, ಕೊನೆಯಲ್ಲಿ ರಾಮನಿಂದ ರಾವಣನ ವಧೆಯ ಕಥಾ ಹಂದರವನ್ನು ಶ್ರೀರಾಮ ದರ್ಶನ ಪ್ರಸಂಗ ಹೊಂದಿದೆ. ಮತ್ಸ್ಯಾವತಾರದಿಂದ ರಾಮಾವತಾರದವರೆಗಿನ ದೃಶ್ಯಗಳನ್ನು ವಿದ್ಯಾರ್ಥಿಗಳು ಮನಮುಟ್ಟುವಂತೆ ಅಭಿನಯಿಸಿ, ಮೆಚ್ಚುಗೆ ಗಳಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಮಾನಿಗದ್ದೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟ್ರಸ್ಟ್ ನ ಅಧ್ಯಕ್ಷ ಸುಬ್ರಾಯ ಹೆಗಡೆ ಮಳಗಿಮನೆ ಮಾತನಾಡಿ, ಕಲಾಸಕ್ತರಿಗೆ ಕಲೆಯ ತರಬೇತಿ ನೀಡುವ ಕಾರ್ಯವನ್ನು ಎಲ್ಲರ ಸಹಕಾರದಿಂದ ಮಾಡುತ್ತ ಬಂದಿದ್ದೇವೆ ಎಂದರು.
ತರಗತಿಯ ಶಿಕ್ಷಕ ಸದಾಶಿವ ಮಲವಳ್ಳಿ ತರಬೇತಿ ಕೇಂದ್ರ ಸಾಗಿ ಬಂದ ಬಗ್ಗೆ ಹಾಗೂ ಉದ್ದೇಶದ ಕುರಿತು ವಿವರಿಸಿದರು. ಟ್ರಸ್ಟ್ ನ ಸಂಚಾಲಕ ಸತೀಶ ಯಲ್ಲಾಪುರ, ಶಿಕ್ಷಕ ಅನಂತ ಹೆಗಡೆ ದಂತಳಿಗೆ ಉಪಸ್ಥಿತರಿದ್ದರು. ಟ್ರಸ್ಟ್ ನ ಸದಸ್ಯ ಶ್ರೀಧರ ಹೆಗಡೆ ಮಾಳಕೊಪ್ಪ ನಿರ್ವಹಿಸಿದರು.